ಧಾರವಾಡ: ಪಂಚರಾಜ್ಯ ಚುನಾವಣೆ ಫಲಿತಾಂಶ ಹಿನ್ನೆಲೆ ನಾವು ಖಂಡಿತ ಫೋರ್ ಹೊಡಿತೀವಿ, ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆಲ್ಲುವ ಜೊತೆಗೆ ಒಳ್ಳೇ ಫಲಿತಾಂಶದ ಭರವಸೆ ಇದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಲ್ಕು ರಾಜ್ಯಗಳಲ್ಲಿ ನಮ್ಮ ಸರ್ಕಾರ ಬರುತ್ತದೆ ಎಂಬ ವಿಶ್ವಾಸ ಇದೆ. ಒಂದು ರಾಜ್ಯದಲ್ಲಿ ಮಾತ್ರ ಹಿನ್ನೆಡೆ ಇದೆ. ಪ್ರತಿಪಕ್ಷ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅದು ತನ್ನ ರಾಷ್ಟ್ರೀಯ ಪಕ್ಷದ ಸ್ವರೂಪವನ್ನೇ ಕಳೆದುಕೊಂಡಿದೆ. ಜನರು ಆ ಪಕ್ಷದ ಮೇಲೆ ಭರವಸೆ ಇಟ್ಟಿಲ್ಲ ಎಂದು ಟೀಕಿಸಿದ್ದಾರೆ.
ನಮ್ಮ ರಾಜ್ಯದಲ್ಲಿಯೂ ಮುಂದೆ ಕಾಂಗ್ರೆಸ್ ಇರುವುದಿಲ್ಲ. 2023ಕ್ಕೆ ನಾವು ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ. ಪಂಜಾಬ್‌ನಲ್ಲಿ ನಮ್ಮದು ಪಾಲ್ಗೊಳ್ಳುವಿಕೆ ಹೆಚ್ಚಿರಲಿಲ್ಲ, ಅಲ್ಲಿನ ಜನಾಭಿಪ್ರಾಯ ಸ್ವೀಕರಿಸುತ್ತೇವೆ. ಮುಂದಿನ ದಿನಗಳಲ್ಲಿ ಪಂಜಾಬಿನಲ್ಲಿಯೂ ಗೆಲ್ಲುವ ಭರವಸೆ ಇದೆ ಎಂದರು.
ಪಂಜಾಬ್‌ನಲ್ಲಿ ಆಮ್ ಆದ್ಮಿ ಮುನ್ನಡೆ ವಿಚಾರದ ಕುರಿತು ಮಾತನಾಡಿದ ಸಚಿವರು, ಆಮ್ ಆದ್ಮಿ ಪಕ್ಷ ದೆಹಲಿಯಂತಹ ಸಿಟಿಯಲ್ಲಿ ರಾಜಕೀಯ ಮಾಡಬಹುದಷ್ಟೇ. ಪಂಜಾಬ್‌ನಂತಹ ರಾಜ್ಯದಲ್ಲಿ ಅವರ ಸರ್ಕಾರ ಬಂದರೂ ಬೇಗ ಕೊನೆಯಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಇಂತಹ ಪಕ್ಷಗಳು ಅಲ್ಲಿ ನೆಲೆ ಊರಲು ಸಾಧ್ಯವಿಲ್ಲ. ಇಂತಹ ಪಕ್ಷಗಳು ಬರುತ್ತವೆ, ಹೋಗುತ್ತವೆ. ಆ ಪಕ್ಷಕ್ಕೆ ಮಾನ್ಯತೆ ಕೊಡುವ ಅವಶ್ಯಕತೆ ಇಲ್ಲ. ಇಂತಹ ಪಕ್ಷಕ್ಕೆ ಭವಿಷ್ಯವಿಲ್ಲ, ಯಾವುದೇ ಸಿದ್ಧಾಂತಗಳಿಲ್ಲ. ಸಣ್ಣ ಮಟ್ಟದಲ್ಲಿ ನಗರದ ಪ್ರದೇಶದಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ ಎಂದು ಸಚಿವ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಓದಿ : Goa Result: ಬಹುಮತದ ಗಡಿ ಸಮೀಪದಲ್ಲಿ ಬಿಜೆಪಿ, ಮುನ್ನಡೆ ಕಾಯ್ದುಕೊಂಡ ಪ್ರಮೋದ್ ಸಾವಂತ್