ಹುಬ್ಬಳ್ಳಿ : ಕೊರೊನಾ ಹೆತ್ತು ಹೊತ್ತವರನ್ನು, ಕರುಳಬಳ್ಳಿಯನ್ನೂ ದೂರ ಮಾಡಿದೆ. ಸತ್ತರೆ ಅವರ ಅಂತ್ಯ ಸಂಸ್ಕಾರದಲ್ಲಿ ಸಂಬಂಧಿಗಳು ಪಾಲ್ಗೊಳ್ಳಲು ಆಗದ ಸ್ಥಿತಿ ಇದೆ. ಇಂತಹ ಸ್ಥಿತಿಯಲ್ಲಿಯೂ ಬಂಧುಗಳಲ್ಲದ ತಂಡವೊಂದು ಕೋವಿಡ್ ಮೃತರ ಅಂತ್ಯಸಂಸ್ಕಾರ ಮಾಡುವ ನಿರ್ವಹಣೆ ಹೊತ್ತು ಮೃತರ ಆತ್ಮಕ್ಕೆ ಸದ್ಗತಿ ನೀಡುವ ಕಾಯಕ ಮಾಡುತ್ತಿದೆ.
ಹೌದು, ಅವರೆಲ್ಲ ಕುಟುಂಬದಿಂದ ದೂರವಾಗಿ ಅದೆಷ್ಟೋ ದಿನಗಳೇ ಕಳೆದವು. ಮಡದಿ, ಮಕ್ಕಳು ಹಾಗೂ ಹೆತ್ತವರ ಮುಖ ನೋಡಿ ತಿಂಗಳುಗಳೇ ಉರುಳಿ ಹೋದವು. ಆದರೂ ಯಾವುದೇ ಅಂಜಿಕೆಯಿಲ್ಲದೇ ಪುಣ್ಯದ ಕಾರ್ಯ ಮಾಡುತ್ತಿದ್ದಾರೆ. ಮಾಡುವ ಕೆಲಸದಲ್ಲಿ ಅದೆಷ್ಟೋ ಅಡೆತಡೆಗಳು ಬಂದರೂ ಎದೆಗುಂದದೆ ಕಾರ್ಯನಿರ್ವಹಿಸುತ್ತಿದ್ದಾರೆ.
ಪಿಪಿಇ ಕಿಟ್ ಹಾಕಿಕೊಂಡು ಆ್ಯಂಬುಲೆನ್ಸ್ನಲ್ಲಿ ಶವವನ್ನು ಹಾಕಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ಮಾಡುತ್ತಿರುವವರು. ಆದರೆ, ಮೃತರ ಸಂಬಂಧಿಕರಲ್ಲ ಅಂತಾರೆ ಕೊರೊನಾದಿಂದ ಮೃತಪಟ್ಟವರ ಶವ ಸಂಸ್ಕಾರ ಮಾಡುವ ಸಿಬ್ಬಂದಿ.
ಶವ ಸಂಸ್ಕಾರ ಮಾಡುವುದು ಪುಣ್ಯದ ಕೆಲಸ. ಅಲ್ಲದೇ ಅಂತಿಮ ಸಂಸ್ಕಾರಕ್ಕೆ ಹೋಗುವುದು ಕೂಡ ಅಷ್ಟೇ ಮಹತ್ವದ ಕೆಲಸವಾಗಿದೆ. ಕೊರೊನಾ ಸೋಂಕಿನ ಭಯದಿಂದ ಯಾವ ಸಂಬಂಧಿಕರು ಶವ ಸಂಸ್ಕಾರಕ್ಕೆ ಬರುವುದಿಲ್ಲ. ಈ ಎಲ್ಲ ಕಾರ್ಯವನ್ನು ಇಲ್ಲಿನ ಸಿಬ್ಬಂದಿಗಳೇ ಮಾಡುತ್ತಿದ್ದಾರೆ.
ಒಂದು ಬಾರಿ ಪಿಪಿಇ ಕಿಟ್ ಧರಿಸಿದರೆ ಅಂತ್ಯ ಸಂಸ್ಕಾರ ಮುಗಿಯುವವರೆಗೂ ತೆಗೆಯುವಂತಿಲ್ಲ. ದೂರದ ಊರಿಗೆ ಹೋಗಿ, ಅಂತ್ಯಕ್ರಿಯೆ ಮಾಡುವವರೆಗೆ ಒಮ್ಮೊಮ್ಮೆ ಎಂಟರಿಂದ ಹತ್ತು ತಾಸುಗಳು ಆಗುತ್ತದೆ. ಆ ಅವಧಿಯಲ್ಲಿ ಗುಟುಕು ನೀರು ಸಹ ಕುಡಿಯುವಂತಿಲ್ಲ. ದಿನದ ಬಹುತೇಕ ಸಮಯ ಆಸ್ಪತ್ರೆಯಲ್ಲಿಯೇ ಕಳೆಯುತ್ತಿದ್ದಾರೆ.
ಕೋವಿಡ್‌ನಿಂದ ಮೃತಪಟ್ಟವರ ದೇಹಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು ಜಿಲ್ಲಾಡಳಿತ, ಕಿಮ್ಸ್ ನಿರ್ದೇಶಕರ ಮಾರ್ಗದರ್ಶನದಲ್ಲಿ ತಜ್ಞ ವೈದ್ಯರೂ ಸೇರಿದಂತೆ ಒಂಬತ್ತು ಮಂದಿಯ ತಂಡ ರಚಿಸಿದೆ. ಕೋವಿಡ್ ಶಂಕೆಯಿಂದ ಮೃತಪಟ್ಟವರ ದೇಹಗಳ ನಿರ್ವಹಣೆಯೂ ಇವರದ್ದೇ ಜವಾಬ್ದಾರಿಯಾಗಿದೆ.
ಕಿಮ್ಸ್ ವ್ಯಾಪ್ತಿಯ ಸುಮಾರು 100 -150 ಕಿ.ಮೀ. ಸುತ್ತಲಿನ ಪ್ರದೇಶ ಗಳಿಗೆ ಕುಟುಂಬಸ್ಥರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ಮಾಡಲು ಆ್ಯಂಬುಲೆನ್ಸ್ ಮೂಲಕ ಕೊಂಡೊಯ್ಯಲಾಗುತ್ತದೆ. ಒಮ್ಮೊಮ್ಮೆ ಊರಿನಲ್ಲಿ ಮೃತದೇಹ ಸಂಸ್ಕಾರ ನಡೆಸುವುದನ್ನು ವಿರೋಧಿಸಿ ಪ್ರತಿಭಟನೆ, ಗಲಾಟೆಗಳು ನಡೆಯುತ್ತವೆ. ಪರ್ಯಾಯ ಮಾರ್ಗ ಹುಡುಕುವವರೆಗೆ, ಸಂಧಾನವಾಗುವವರೆಗೆ ಮೂರ್ನಾಲ್ಕು ಗಂಟೆಗಳು ಕಳೆದು ಹೋಗುತ್ತವೆ. ಮುಖಕ್ಕೆ ಹಾಕಿದ ಕವರ್ ತೆಗೆಯಲೂ ಆತಂಕ. ಮೃತದೇಹಗಳನ್ನು ಪ್ಯಾಕ್ ಮಾಡುವುದರಿಂದ, ಸೋಂಕು ಪಿಪಿಇ ಕಿಟ್ ಮೇಲೆ ಇರುವ ಸಾಧ್ಯತೆಯಿಂದಾಗಿ ವೈರಸ್ ದೇಹವನ್ನ ಎಲ್ಲಿ ಪ್ರವೇಶಿಸುತ್ತದೆಯೋ ಎನ್ನುವ ಭಯದಲ್ಲಿಯೇ ಕಾರ್ಯನಿರ್ವಹಿಸಬೇಕಿದೆ.
ಬಂಧು ಬಳಗವಲ್ಲದವರು ಮಾಡುವ ಕಾರ್ಯಕ್ಕೆ ಕೆಲಕಡೆ ಅಪಸ್ವರಗಳು ಕೇಳಿ ಬರುತ್ತಿವೆ. ಆದರೂ ನಮ್ಮ ಕಾಯಕ ನಾವು ಮಾಡುತ್ತೇವೆ. ಇದೊಂದು ದೇಶಸೇವೆ ಎನ್ನುವ ಭಾವನೆಯನ್ನು ಸಿಬ್ಬಂದಿ ಹೊಂದಿದ್ದಾರೆ. ಮನಸ್ಸಿನಲ್ಲಿ ನೋವಿದ್ದರೂ ಮೃತರ ಆತ್ಮಕ್ಕೆ ಶಾಂತಿ ಕಲ್ಪಿಸುವ ಇವರ ಕಾಯಕ ಅಭಿನಂದನಾರ್ಹವಾಗಿದೆ.