ಹುಬ್ಬಳ್ಳಿ: ವೈದ್ಯರ ಯಡವಟ್ಟಿನಿಂದ 27ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ತಾಲೂಕಿನ ಹೆಬಸೂರು ಗ್ರಾಮದಲ್ಲಿ ನಡೆದಿದೆ.
ಡಿ.ಟಿ (diphtria tetanus) ಇಂಜೆಕ್ಷನ್ ರಿಯಾಕ್ಷನ್‌ನಿಂದಾಗಿ 27ಕ್ಕೂ ಅಧಿಕ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥ ಮಕ್ಕಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಹುಬ್ಬಳ್ಳಿ ತಾಲೂಕಿನ ಹೆಬಸೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಇಂದು ಮಧ್ಯಾಹ್ನ ಊಟಕ್ಕಿಂತ ಮುಂಚೆಯೇ ಮಕ್ಕಳಿಗೆ ಗಂಟಲು ನೋವು, ಕೈಕಾಲು ನೋವು ಸೇರಿದಂತೆ ಹಲವು ರೋಗ ನಿವಾರಣೆಗಾಗಿ ಡಿಟಿ ಇಂಜೆಕ್ಷನ್ ನೀಡಲಾಗಿತ್ತು. ಮಕ್ಕಳಿಗೆ ಡಿಟಿ ಇಂಜೆಕ್ಷನ್ ನೀಡಿದ ಬಳಿಕ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ವೈದ್ಯರು ಮಾಡಿದ ಎಡವಟ್ಟಿನಿಂದಾಗಿ ಮಕ್ಕಳು ಅಸ್ವಸ್ಥಗೊಂಡಿದ್ದಾರೆ ಎಂದು ಮಕ್ಕಳ ಸಂಬಂಧಿಗಳು ಆರೋಪಿಸುತ್ತಿದ್ದಾರೆ.
ಇನ್ನು ಘಟನೆ ಬಗ್ಗೆ ತಿಳಿದ ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಕಿಮ್ಸ್ಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಸಿ, ಮಕ್ಕಳಿಗೆ ಯಾವುದೇ ರೀತಿ ತೊಂದರೆ ಇಲ್ಲ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಯಾರು ಭಯ ಪಡುವ ಅವಶ್ಯಕತೆ ಇಲ್ಲ ಎಂದು ಪಾಲಕರಿಗೆ ಧೈರ್ಯ ತುಂಬಿದ್ದಾರೆ.