ಧಾರವಾಡ: ಜಿಪಂ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಮನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಧಾರವಾಡದ ಶಿವಗಿರಿಯಲ್ಲಿರುವ ವಿನಯ್ ನಿವಾಸಕ್ಕೆ ಭೇಟಿ ನೀಡಿದ ಡಿಕೆಶಿ, ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಹೊರಬಂದು, ಏನೂ ಚಿಂತೆ ಮಾಡಬೇಡಿ. ನ್ಯಾಯಾಲಯದ ಮೇಲೆ ವಿಶ್ವಾಸವಿಡಿ, ಎಲ್ಲರೂ ಧೈರ್ಯವಾಗಿರಿ ಎಂದು ಕೈ ಕಾರ್ಯಕರ್ತರಿಗೆ ಧೈರ್ಯ ತುಂಬಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿನಯ್ ಕುಲಕರ್ಣಿ ಬಂಧನ ರಾಜಕೀಯ ಪ್ರೇರಿತ. ಅವರು ಏನೂ ತಪ್ಪು ಮಾಡಿಲ್ಲ ಎನ್ನುವುದು ಗೊತ್ತಿದೆ. ಒತ್ತಡದಲ್ಲಿ ಸಿಬಿಐ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಮನೆಯವರು ಅಳಲು ತೋಡಿಕೊಂಡಿದ್ದಾರೆ. ಎಲ್ಲಾ ವಿಚಾರ ಹೇಳಲು ಆಗುವುದಿಲ್ಲ, ನಮಗೂ ನ್ಯಾಯಾಲಯವಿದೆ, ಕಾನೂನಿದೆ. ವಿನಯ್ ತಪ್ಪು ಮಾಡಿಲ್ಲ ಎಂದು ಸಮರ್ಥಿಸಿಕೊಂಡರು.