ಧಾರವಾಡ: ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆ ಪ್ರಕ್ರಿಯೆಯಲ್ಲಿ ಆರೋಗ್ಯ ಇಲಾಖೆ ನೀಡಿರುವ ಕೋವಿಡ್ -19 ಮಾರ್ಗಸೂಚಿಗಳ ಪಾಲನೆ ಮತ್ತು ಪ್ರತಿಯೊಬ್ಬರು ಯಶಸ್ವಿಯಾಗಿ ಚುನಾವಣಾ ಕರ್ತವ್ಯ ನಿರ್ವಹಿಸುವಲ್ಲಿ ಆರೋಗ್ಯ ಸಿಬ್ಬಂದಿಯ ಪಾತ್ರವೂ ಮುಖ್ಯವಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೆಕ್ಟರ್ ಅಧಿಕಾರಿಗಳಿಗೆ ಮತ್ತು ಚುನಾವಣಾ ದಿನಗಳಂದು ಕರ್ತವ್ಯ ನಿರ್ವಹಿಸುವ ಆರೋಗ್ಯ ಇಲಾಖೆ ಸಿಬ್ಬಂದಿಗೆ ಆಯೋಜಿಸಿದ್ದ ಕೋವಿಡ್ -19 ಆರೋಗ್ಯ ಸುರಕ್ಷತಾ ಮಾರ್ಗಸೂಚಿಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಆರೋಗ್ಯ ಇಲಾಖೆಯು ಪಶ್ಚಿಮ ಪದವೀಧರ ಮತಕ್ಷೇತ್ರ ಚುನಾವಣೆಯಲ್ಲಿ ಪಾಲಿಸಲು ಪ್ರತ್ಯೇಕವಾದ ಕೋವಿಡ್-19 ಮಾರ್ಗಸೂಚಿಗಳನ್ನು (ಎಸ್‍ಓಪಿ) ನೀಡಿದೆ. ಅದರಂತೆ ಜಿಲ್ಲಾ ಆರೋಗ್ಯ ಅಧಿಕಾರಿಯನ್ನು ಜಿಲ್ಲಾ ಹೆಲ್ತ್ ನೋಡಲ್ ಅಧಿಕಾರಿಯಾಗಿ ಹಾಗೂ ಸೆಕ್ಟರ್ ಹೆಲ್ತ್ ಅಧಿಕಾರಿಯಾಗಿ ತಾಲೂಕು ಆರೋಗ್ಯ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಪ್ರತಿ ಮತಗಟ್ಟೆಗೆ ಚುನಾವಣಾ ಸಿಬ್ಬಂದಿಯೊಂದಿಗೆ ಓರ್ವ ವೈದ್ಯ, ಆಶಾ ಹಾಗೂ ಎಎನ್ಎಂ ಕಾರ್ಯರ್ತರನ್ನು ನೇಮಿಸಿ ಆದೇಶಿಸಲಾಗಿದೆ. ನೇಮಕಗೊಂಡ ಸಿಬ್ಬಂದಿ ಸೆಕ್ಟರ್ ಅಧಿಕಾರಿಗಳೊಂದಿಗೆ ನೇಮಿಸಿದ ಸ್ಥಳಗಳಲ್ಲಿ ಅಕ್ಟೋಬರ್ 27 ಹಾಗೂ 28 ರಂದು ಹಾಜರಿದ್ದು, ಕರ್ತವ್ಯ ನಿರ್ವಹಿಸಬೇಕಾಗುತ್ತದೆ.
ಪ್ರತಿ ಮತಗಟ್ಟೆಯಲ್ಲಿ ಸುಸಜ್ಜಿತ ಕೋಣೆ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಸೌಕರ್ಯಗಳು ಸುಸ್ಥಿತಿಯಲ್ಲಿ ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಪ್ರತಿ ಮತಗಟ್ಟೆ ಹತ್ತಿರ ಕೋವಿಡ್ ಲಕ್ಷಣ ಇರುವವರ ವಿಶ್ರಾಂತಿ, ತಕ್ಷಣ ಆರೈಕೆಗಾಗಿ ಪ್ರತ್ಯೇಕ ಐಸೋಲೇಷನ್ ರೂಮ್ ವ್ಯವಸ್ಥೆ ಮಾಡಿರಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪ್ರತಿ ಮತಗಟ್ಟೆಗೆ ಅಗತ್ಯವಿರುವಷ್ಟು ಸ್ಯಾನಿಟೈಸರ್, ಸಿಬ್ಬಂದಿಗೆ ಮಾಸ್ಕ್, ಹ್ಯಾಂಡ್‍ಗ್ಲೌಸ್, ಪಲ್ಸ್ ಆಕ್ಸಿಮೀಟರ್, ಥರ್ಮಲ್ ಸ್ಕ್ಯಾನರ್, ಪಿಪಿಇ ಕಿಟ್ ಮತ್ತು ಹ್ಯಾಂಡ್ ವಾಶರ್ಗಳನ್ನು ನೀಡಲಾಗುತ್ತದೆ. ಮತದಾನಕ್ಕೆ ಬರುವ ಪ್ರತಿಯೊಬ್ಬರಿಗೆ ಪಲ್ಸ್ ಆಕ್ಸಿಮೀಟರ್ ಹಾಗೂ ಥರ್ಮಲ್ ಸ್ಕ್ಯಾನರ್ ಮೂಲಕ ಆರೋಗ್ಯ ತಪಾಸಣೆ ಮಾಡಬೇಕು ಎಂದು ಆದೇಶಿಸಲಾಗಿದೆ.
ಬಿಎಲ್‍ಒಗಳ ಮೂಲಕ ವೋಟರ್ ಸ್ಲಿಪ್‍ಗಳನ್ನು ಮತದಾರನ ಮನೆಗೆ ತಲುಪಿಸುವ ಕಾರ್ಯ ಈಗಾಗಲೇ ಪ್ರಗತಿಯಲ್ಲಿದೆ. ಕೋವಿಡ್ ಸೋಂಕಿತರಾಗಿರುವ ಅರ್ಹ ಮತದಾರ ಮತದಾನ ಮಾಡಲು ಬರುವುದನ್ನು ಮುಂಚಿತವಾಗಿ ಖಚಿತಪಡಿಸಿದರೆ, ಅವರಿಗೆ ಆ್ಯಂಬುಲೆನ್ಸ್ ಮೂಲಕ ಅವರಿದ್ದ ಸ್ಥಳದಿಂದ ನೇರವಾಗಿ ಮತಗಟ್ಟೆಗೆ ಕರೆತಂದು, ಮತದಾನದ ನಂತರ ಅವರ ಸ್ಥಳಕ್ಕೆ ಬಿಡಲಾಗುತ್ತದೆ.
ಮತದಾನದ ದಿನದಂದು ಕೊನೆಯ ಒಂದು ಗಂಟೆಯನ್ನು ಕೋವಿಡ್ ಸೋಂಕಿತರಿಗೆ ಮತ್ತು ಕೋವಿಡ್ ಲಕ್ಷಣ ಇರುವವರಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಎಲ್ಲ ಆರೋಗ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.