ಹುಬ್ಬಳ್ಳಿ: ಬ್ಯಾಂಕ್ ಆಫ್ ಬರೋಡದ ಸಂಸ್ಥಾಪನಾ ದಿನದ ಅಂಗವಾಗಿ ಹುಬ್ಬಳ್ಳಿಯ ವಿದ್ಯಾನಗರ ಶಾಖೆ ವತಿಯಿಂದ ಹೊಸೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಮಕ್ಕಳಿಗೆ 250,00 ಮೌಲ್ಯದ 350 ಬಿಸಿಯೂಟದ ತಟ್ಟೆಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ವಿದ್ಯಾನಗರ ಶಾಖೆ ಬ್ಯಾಂಕ್ ವ್ಯವಸ್ಥಾಪಕ ಶ್ರೀನಿವಾಸ ರವಿಪತಿ, ವಿದ್ಯಾರ್ಥಿ ಜೀವನದಲ್ಲಿ ವಿಧೇಯತೆ, ಅಧ್ಯಯನಶೀಲತೆ, ಸಾಮಾಜಿಕ ಸಂಸ್ಕಾರಗಳನ್ನು ಕಲಿಯುವುದು ಮುಖ್ಯ. ಸಮಯವನ್ನು ಹಾಳು ಮಾಡದೆ ಅಭ್ಯಾಸ ನಡೆಸಿದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ವಿದ್ಯಾರ್ಥಿ ಜೀವನದಿಂದಲೇ ಮಕ್ಕಳು ಬ್ಯಾಂಕಿಂಗ್ ವ್ಯವಹಾರ, ಬ್ಯಾಂಕಿಂಗ್ ಜ್ಞಾನ ಹೊಂದಿ ಹಣ ಉಳಿತಾಯ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಹುಬ್ಬಳ್ಳಿ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ, ಮಕ್ಕಳ ಕಲಿಕೆ ಹಾಗೂ ಪ್ರಗತಿಗಾಗಿ ಶ್ರಮಿಸುತ್ತಿರುವ ಶಿಕ್ಷಣ ಇಲಾಖೆಗೆ ಸಹಕಾರ ನೀಡಿ, ಮಕ್ಕಳ ಬಿಸಿಯೂಟಕ್ಕೆ ಅಗತ್ಯವಿರುವ ತಟ್ಟೆಗಳನ್ನು ನೀಡಿದ ಬ್ಯಾಂಕ್ ಆಫ್ ಬರೋಡವನ್ನು ಅಭಿನಂದಿಸಿದರು.