ಹುಬ್ಬಳ್ಳಿ: ಕೊರೊನಾ ಅವಧಿಯಲ್ಲಿ ಕರ್ತವ್ಯದಲ್ಲಿ ತೊಡಗಿಕೊಂಡಿರುವ ಸಿಬ್ಬಂದಿಯ ಆರೋಗ್ಯ ರಕ್ಷಣೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಭಾಗದ ಸಿಬ್ಬಂದಿಗೆ ಆಯುಷ್ ಇಲಾಖೆಯ ವತಿಯಿಂದ ನೀಡಲಾದ 'ಆರ್ಸೆನಿಕ್ ಅಲ್ಬಂ-30' ಹೋಮಿಯೋಪತಿ ಮಾತ್ರೆಗಳನ್ನು ವಿತರಿಸಲಾಯಿತು.
ವಿಭಾಗೀಯ ಕಚೇರಿಯಲ್ಲಿ ಮಾತ್ರೆಗಳನ್ನು ವಿತರಿಸಿದ ನಂತರ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ್ ಮಾತನಾಡಿ, ವಿಭಾಗದ 2000ಕ್ಕೂ ಹೆಚ್ಚಿನ ಸಿಬ್ಬಂದಿ ಮತ್ತು ಅವರ ಕುಟುಂಬದ ಸದಸ್ಯರಿಗೆ ಅಗತ್ಯವಿರುವಷ್ಟು ಹೋಮಿಯೋಪತಿ ಮಾತ್ರೆಗಳನ್ನು ಉಚಿತವಾಗಿ ನೀಡಿದ್ದಕ್ಕಾಗಿ ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿಗಳಿಗೆ ಕೃತಜ್ಞತೆ ತಿಳಿಸಿದರು.
ಜಿಲ್ಲೆಯ ಆಯುಷ್ ಇಲಾಖೆಯ ಅಧಿಕಾರಿಗಳು ತಿಳಿಸಿದಂತೆ ಕೊರೊನಾ ಸಮಯದಲ್ಲಿ ಆಯುಷ್ ಮಂತ್ರಾಲಯದ ಮಾರ್ಗದರ್ಶನಗಳು ಹಾಗೂ ಆಯುಷ್ ಔಷಧಿಗಳು ಸೋಂಕು ತಗುಲದಂತೆ ರಕ್ಷಣೆ ಪಡೆಯಲು ರೋಗ ನಿರೋಧಕ ಶಕ್ತಿ ಮತ್ತು ವೈರಾಣು ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿರುತ್ತದೆ. ಆರ್ಸೆನಿಕ್ ಅಲ್ಬಂ-3 ಮಾತ್ರೆಗಳು ಸಿಹಿಯಾಗಿದ್ದು, ಬಾಯಿಯಲ್ಲಿಟ್ಟುಕೊಂಡು ಚೀಪುವ ಮೂಲಕ ತೆಗೆದುಕೊಳ್ಳಬೇಕು ಎಂದರು.
ಪ್ರತಿದಿನ 6 ಮಾತ್ರೆಗಳಂತೆ ನಿರಂತರವಾಗಿ ಮೂರು ದಿನ ತೆಗೆದುಕೊಳ್ಳಬೇಕು. ಮಾತ್ರೆ ತೆಗೆದುಕೊಂಡ ಅರ್ಧ ಗಂಟೆಯವರೆಗೆ ಟೀ, ಕಾಫಿ ಸೇರಿ ಯಾವುದೇ ಆಹಾರ ಸೇವಿಸಬಾರದು. ಮತ್ತೆ ಎರಡು ತಿಂಗಳ ಅವಧಿಗೆ ಮೊದಲ ತಿಂಗಳ ಮಾತ್ರೆ ಸೇವಿಸಿದ ನಿಗದಿತ ದಿನಾಂಕಗಳಂದು ಒಟ್ಟಾರೆಯಾಗಿ ನಿರಂತರವಾಗಿ ಮೂರು ದಿನಗಳ ಅವಧಿಗೆ ಈ ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಎಂದರು. ( ಉದಾಹರಣೆಗೆ ಪ್ರತಿ ತಿಂಗಳು ದಿನಾಂಕ 25, 26 ಮತ್ತು 27ರಂದು)
ಇನ್ನು ಕರ್ತವ್ಯ ನಿರ್ವಹಿಸುವಾಗ ಕಡ್ಡಾಯವಾಗಿ ಮಾಸ್ಕ್ ಮತ್ತು ಕೈಗವಸು ಧರಿಸುವುದು, ಪರಸ್ಪರ ಸಾಮಾಜಿಕ ಮತ್ತು ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು, ಪದೇ ಪದೆ ಸ್ಯಾನಿಟೈಸರ್ ಬಳಸುವುದು ಮುಂತಾದ ಎಲ್ಲಾ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ್ ತಿಳಿಸಿದ್ದಾರೆ.