ನವದೆಹಲಿ: ದೇಶದ ಮೊಟ್ಟ ಮೊದಲ ಪ್ರಧಾನಮಂತ್ರಿ ಜವಾಹರ್‌ಲಾಲ್ ಅವರ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಜವಾಹರ್‌ಲಾಲ್ ನೆಹರು ಅವರ ಜನ್ಮದಿನದ ಅಂಗವಾಗಿ ನಾನು ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಅಲಹಾಬಾದ್ (ಈಗಿನ ಪ್ರಯಾಗ್ರಾಜ್)ನಲ್ಲಿ 1889ರಲ್ಲಿ ನೆಹರು ಜನಿಸಿದರು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದಾರೆ. 1964ರ ಮೇ 27ರಂದು ನಿಧನರಾಗಿದ್ದರು.
ನೆಹರು ಜನ್ಮದಿನದಂದು ಮಕ್ಕಳ ದಿನಾಚರಣೆ: ನೆಹರು ಜನ್ಮದಿನವನ್ನು ದೇಶದೆಲ್ಲೆಡೆ ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಈ ದಿನವನ್ನು 'ಬಾಲ್ ದಿವಸ್' ಎಂದೂ ಸಂಭ್ರಮಿಸಲಾಗುತ್ತದೆ.
ಮಕ್ಕಳ ಬಗ್ಗೆ ನೆಹರು ಅವರಿಗಿದ್ದ ಪ್ರೀತಿಯನ್ನು ಈ ದಿನಾಚರಣೆಯ ಮೂಲಕ ನೆನಪು ಮಾಡಿಕೊಳ್ಳಲಾಗುತ್ತದೆ. ಇಂದು ಮಕ್ಕಳು ನೆಹರೂ ಅವರಂತೆ ವಿಶೇಷ ಉಡುಪು ಧರಿಸಿ ಖುಷಿ ಪಡುವುದನ್ನು ದೇಶದ ಅಲ್ಲಲ್ಲಿ ಕಾಣಬಹುದು. ಅಷ್ಟೇ ಅಲ್ಲದೇ, ಎಲ್ಲ ಜಾತಿ, ಧರ್ಮ ಯಾವುದೇ ಸಾಮಾಜಿಕ, ಆರ್ಥಿಕ ಅಥವಾ ರಾಜಕೀಯ ಸ್ಥಿತಿಯನ್ನು ಲೆಕ್ಕಿಸದೆ ಪ್ರತೀ ಮಗುವಿಗೂ ಉತ್ತಮ ಆರೋಗ್ಯ, ಶಿಕ್ಷಣ ಮತ್ತು ನೈರ್ಮಲ್ಯ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಸದುದ್ದೇಶವನ್ನು ಈ ದಿನ ಸಾರುತ್ತದೆ.
ಮಕ್ಕಳ ದಿನಾಚರಣೆಯಾಗಿ ಘೋಷಣೆ: ಭಾರತ ಸ್ವಾತಂತ್ರ ಪಡೆದು ಹತ್ತು ವರ್ಷಗಳ ಬಳಿಕ 1957ರಲ್ಲಿ ನೆಹರು ಅವರ ಜನ್ಮದಿನವನ್ನು ಅಧಿಕೃತವಾಗಿ ಮಕ್ಕಳ ದಿನಾಚರಣೆಯಾಗಿ ಘೋಷಿಸಲಾಯಿತು.
ಚಾಚಾ ನೆಹರು: ನೆಹರು ಮಕ್ಕಳ ಬಗ್ಗೆ ಅಗಾಧ ಪ್ರೀತಿ ಹೊಂದಿದ್ದರು. ಮಕ್ಕಳಿಗಾಗಿಯೇ ಸ್ಥಳೀಯ ಸಿನಿಮಾ ಸೃಷ್ಟಿಸುವ ಉದ್ದೇಶದಿಂದ 1955ರಲ್ಲಿ ಚಿಲ್ಡ್ರನ್ ಫಿಲ್ಮ್ ಸೊಸೈಟಿ ಇಂಡಿಯಾ ಸ್ಥಾಪಿಸಿದ್ದರು. ಮಕ್ಕಳ ಹಕ್ಕುಗಳ ಬಗ್ಗೆಯೂ ಹೆಚ್ಚು ವಾದಿಸಿದ್ದರು. ಎಲ್ಲಾ ಮಕ್ಕಳು ಪ್ರವೇಶಿಸಬಹುದಾದ ಅಂತರ್ಗತ ಶಿಕ್ಷಣ ವ್ಯವಸ್ಥೆಗೆ ಒತ್ತು ನೀಡಿದ್ದರು.
ನೆಹರು ಅವರನ್ನು 'ಚಾಚಾಜಿ' ಎಂದು ಯಾಕೆ ಕರೆಯುತ್ತಿದ್ದರು ಎಂಬ ದಾಖಲೆಗಳಿಲ್ಲ. ಮಕ್ಕಳ ಮೇಲೆ ಅವರಿಗಿದ್ದ ಪ್ರೀತಿಯೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತದೆ. ಮತ್ತೊಂದು ಮಾಹಿತಿ ಪ್ರಕಾರ, ಮಹಾತ್ಮ ಗಾಂಧಿ ಅವರನ್ನು 'ಬಾಪು' ಎಂದು ಕರೆಯಲಾಗುತ್ತಿತ್ತು. ಮಹಾತ್ಮರನ್ನು ತಮ್ಮ ಹಿರಿಯ ಸಹೋದರ ಎಂದು ನೆಹರು ಪರಿಗಣಿಸಿದ ಹಿನ್ನೆಲೆಯಲ್ಲಿ ಅವರಿಗೆ ಚಾಚಾಜಿ ಎಂದು ಕರೆಯಲಾಯಿತು ಎನ್ನಲಾಗಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ದೇಶದ ಅತಿ ಪ್ರಭಾವಿ ವ್ಯಕ್ತಿ: ರಾಹುಲ್ ಗಾಂಧಿಗೆ 4ನೇ ಸ್ಥಾನ, ನಾಯ್ಡು ಪವರ್ಫುಲ್ ಸಿಎಂ