ಹುಬ್ಬಳ್ಳಿ: ಹಳೆ ಹುಬ್ಬಳ್ಳಿಯಲ್ಲಿರುವ ರಾಜಕಾಲುವೆಗೆ ಕಸಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ ಮತ್ತು ರಾತ್ರೋರಾತ್ರಿ ತಂದು ಸುರಿಯುವ ಕಟ್ಟಡ ನಿರ್ಮಾಣ ತ್ಯಾಜ್ಯಗಳಿಂದಾಗಿ ಕೊಳಚೆ ನೀರು ಹರಿದು ಹೋಗಲು ಅಡ್ಡಿಯಾಗುತ್ತಿದೆ. ಇದರಿಂದಾಗಿ ಇಲ್ಲಿನ ಜನತೆ ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ.
ಜೋರು ಮಳೆ ಬಂದಾಗ ಕಾಲುವೆ ಕಟ್ಟಿಕೊಂಡು ನೀರು ರಸ್ತೆ ಮೇಲೆ ಹರಿಯುತ್ತಿದೆ. ಅಲ್ಲದೆ ಮನೆಯೊಳಗೆ ನೀರು ನುಗ್ಗುತ್ತಿರುವುದರಿಂದ ಜನರು ರೋಗಗಳ ಭೀತಿಯಲ್ಲಿ ಜೀವನ ನಡೆಸುವಂತಾಗಿದೆ.
ಈ ಬಗ್ಗೆ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲವಂತೆ. ಹೀಗಾದರೆ ಜೀವನ ಹೇಗೆ ನಡೆಸಬೇಕು ಅನ್ನೋದು ಸ್ಥಳೀಯರ ಪ್ರಶ್ನೆಯಾಗಿದೆ. ಮೊದಲೇ ಕೊರೊನಾದಂತಹ ಮಾರಕ ರೋಗಗಳಿಂದ ಸಾರ್ವಜನಿಕರು ಕಂಗಾಲಾಗಿದ್ದು, ಕಾಲುವೆ ಅವ್ಯವಸ್ಥೆಯಿಂದ ಮತ್ತಷ್ಟು ಆತಂಕದಲ್ಲಿ ಜೀವನ ಕಳೆಯುವಂತಾಗಿದೆ.
ಈ ಬಗ್ಗೆ ಪ್ರಶ್ನೆ ಮಾಡಿದ್ರೆ ಹಾರಿಕೆ ಉತ್ತರ ನೀಡುತ್ತಿದ್ದು, ರಾಜಕಾಲುವೆಯಿಂದ ಬರುವ ವಾಸನೆಯಿಂದ ಜನರು ಮೂಗು ಮುಚ್ಚಿಕೊಂಡು ತಿರುಗುವಂತಾಗಿದೆ. ಇಲ್ಲಿ ಬರುವ ಕೆಟ್ಟ ವಾಸನೆ ಮತ್ತು ಸೊಳ್ಳೆಗಳಿಂದ ಕಾಯಿಲೆಗಳು ಹರಡುತ್ತಿವೆ. ಮಹಾನಗರ ಪಾಲಿಕೆ ಆಗಾಗ ಕಾಲುವೆ ಸ್ವಚ್ಛಗೊಳಿಸದ ಪರಿಣಾಮ ಪ್ಲಾಸ್ಟಿಕ್ ತುಂಬಿ ತುಳುಕುತ್ತಿದ್ದು, ಧಾರಾಕಾರ ಮಳೆ ಬಂದಾಗ ಕಾಲುವೆ ನೀರು ಹರಿಯುವ ರಭಸಕ್ಕೆ ಕಾಲುವೆ ತುಂಬಿ ನೀರು ಹೊರಗಡೆ ಬರುತ್ತಿದೆ. ಇದರಿಂದ ರಸ್ತೆ ಹಾಗೂ ಮನೆಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತಿದೆ. ಇಲ್ಲಿನ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ರಾಜಕಾಲುವೆ ಸ್ವಚ್ಛಗೊಳಿಸಿ, ಇಲ್ಲಿಯ ನಿವಾಸಿಗಳು ನಿತ್ಯ ಅನುಭವಿಸುತ್ತಿರುವ ನರಕಯಾತನೆಯನ್ನು ತಪ್ಪಿಸಬೇಕು ಎಂದು ಪಾಲಿಕೆ ಮಾಜಿ ಸದಸ್ಯ ಬಸೀರ ಗುಡ್ಮಾಲ್ ಒತ್ತಾಯಿಸಿದ್ದಾರೆ.
ಹುಬ್ಬಳ್ಳಿಯ ಇಂತಹ ಸಮಸ್ಯೆಗೆ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ. ಕೂಡಲೇ ಇಂತಹ ಸಮಸ್ಯೆಗಳನ್ನು ಬಗೆಹರಿಸಿ ಉತ್ತಮ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.