ಧಾರವಾಡ: ರಾಜ್ಯದ ಆರೋಗ್ಯ ಸೇವೆಯಲ್ಲಿ ಗುಣಾತ್ಮಕವಾಗಿ ಅಮೂಲಾಗ್ರ ಬದಲಾವಣೆಗೆ ಚಿಂತಸಲಾಗಿದ್ದು, ಉತ್ತರ ಕರ್ನಾಟಕದ ಡಿಮ್ಹಾನ್ಸ್ ಆಸ್ಪತ್ರೆಯನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯೊಂದಿಗೆ ಸಂಯೋಜಿಸಿ ಮೇಲ್ದರ್ಜೆಗೇರಿಸಲು ಕ್ರಮ ವಹಿಸಲಾಗುವುದು ಮತ್ತು ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ ಶೀಘ್ರ ಮುಂಬಡ್ತಿ ಹಾಗೂ ಅವರ ವೇತನ ಹೆಚ್ಚಳ ಮಾಡಲು ಚಿಂತಿಸಲಾಗುತ್ತಿದೆ ಎಂದು ಸಚಿವ ಡಾ. ಕೆ.ಸುಧಾಕರ್ ಹೇಳಿದರು.
ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ನಿರ್ಮಿಸಿರುವ ಬೇಂದ್ರೆ ಬ್ಲಾಕ್ ನೂತನ ಕಟ್ಟಡ ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಸ್ಥಾಪಿಸಿರುವ ಪೂರ್ಣ ಶರೀರದ ಸಿಟಿ ಸ್ಕ್ಯಾನ್ ಯಂತ್ರ ಹಾಗೂ ಗಣಕೀಕೃತ ಗ್ರಂಥಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ದಕ್ಷಿಣ ಕರ್ನಾಟಕಕಕ್ಕೆ ನಿಮ್ಹಾನ್ಸ್ ಇರುವಂತೆ ಉತ್ತರ ಕರ್ನಾಟಕಕ್ಕೆ ಡಿಮ್ಹಾನ್ಸ್ ಇದೆ. ಇದರ ಉನ್ನತೀಕರಣದಿಂದ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳ ಜನರಿಗೆ ಉತ್ತಮವಾದ ಮಾನಸಿಕ ಆರೋಗ್ಯ ಚಿಕಿತ್ಸೆ ಲಭ್ಯವಾಗಲಿದೆ. ಆರೋಗ್ಯವಂತ ಸಮುದಾಯವಿದ್ದಲ್ಲಿ ಮಾತ್ರ ಶಿಕ್ಷಣ, ಸಂಸ್ಕೃತಿ ಹಾಗೂ ಆರ್ಥಿಕ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ನೂತನವಾಗಿ ಆಯ್ಕೆಯಾಗುವ ವೈದ್ಯರು ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಲು ಹಿಂಜರಿಕೆ ಪಡುತ್ತಾರೆ. ಆದ್ದರಿಂದ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ ಶೀಘ್ರ ಮುಂಬಡ್ತಿ ಹಾಗೂ ಅವರ ವೇತನದಲ್ಲಿ ಹೆಚ್ಚಳ ಮಾಡಲು ಚಿಂತಿಸಲಾತ್ತಿದೆ ಎಂದು ಸಚಿವರು ತಿಳಿಸಿದರು.
ಜನರು ಕಾಯಿಲೆಗಳಿದ್ದಾಗಿಯೂ ಆಸ್ಪತ್ರೆಗೆ ತೋರಿಸಲು ಹಿಂಜರಿಯುತ್ತಿದ್ದಾರೆ. ವಿಶೇಷವಾಗಿ ಮಾನಸಿಕ ಕಾಯಿಲೆಗಳ ಲಕ್ಷಣಗಳು ಕಂಡಾಗ ತಕ್ಷಣ ಪ್ರಾಥಿಮಿಕ ಚಿಕಿತ್ಸೆ ಪಡೆಯುವುದರಿಂದ ಅದರ ಗಂಭೀರ ಪರಿಣಾಮ ಮತ್ತು ತೊಂದರೆಗಳನ್ನು ತಪ್ಪಿಸಬಹುದು. ಜನರು ಮುಗ್ಧತೆ, ಅರಿವಿನ ಕೊರತೆ, ಭಯದಿಂದಾಗಿ ಆಸ್ಪತ್ರೆಗೆ ಬಂದು ಪರೀಕ್ಷಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳ ಮುಖಾಂತರ ಈ ನಿಟ್ಟಿನಲ್ಲಿ ಜನರಿಗೆ ಆರೋಗ್ಯ ತಿಳುವಳಿಕೆ ಕಾರ್ಯಕ್ರಮಗಳನ್ನು ಹೆಚ್ಚಿಸಲಾಗುವುದು ಎಂದು ಹೇಳಿದರು.
ಭಾರತ ಸರ್ಕಾರದ ಆಯುಷ್ಮಾನ್ ಭಾರತ ಹಾಗೂ ಕರ್ನಾಟಕ ಸರ್ಕಾರದ ಆರೋಗ್ಯ ಕರ್ನಾಟಕ ಸೇರಿ ಎಬಿಆರ್ಕೆ ಆರೋಗ್ಯ ಯೋಜನೆ ರೂಪಿಸಿದ್ದು, ಕರ್ನಾಟಕ ರಾಜ್ಯದಲ್ಲಿ ಸುಮಾರು 1.15 ಕೋಟಿ ಕುಟುಂಬಗಳು ಅಯುಷ್ಮಾನ್ ಭಾರತದ ಪ್ರಯೋಜನ ಪಡೆಯುತ್ತಿದ್ದು, ಇದೊಂದು ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಬಿಪಿಎಲ್ ಮತ್ತು ಎಪಿಎಲ್ ಸೇರಿದಂತೆ ಎಲ್ಲ ರೀತಿಯ ಕುಟುಂಬಗಳಿಗೆ ಆಯುಷ್ಮಾನ್ ಭಾರತ ಯೋಜನೆಯಲ್ಲಿ 1685 ಬಗೆಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದಾಗ ಉತ್ತರ ಕರ್ನಾಟಕದ ತಾಲೂಕುಗಳಲ್ಲಿ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳ ಸಂಖ್ಯೆ ಕಡಿಮೆ ಇದೆ. ವೈದ್ಯರ, ಆರೋಗ್ಯ ಸಿಬ್ಬಂದಿ ಕೊರತೆ ಇದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆಯನ್ನು ಪರಿಹರಿಸಲು ವಿಶ್ವಸಂಸ್ಥೆಯ ನೆರವಿನಲ್ಲಿ ಕ್ರಮ ಕೈಗೊಂಡು ಹೆಚ್ಚುವರಿ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳನ್ನು ಮತ್ತು ಆರೋಗ್ಯ ಸಿಬ್ಬಂದಿಯನ್ನು ಹೆಚ್ಚಿಸಲಾಗುವುದು. ಆರೋಗ್ಯ ಇಲಾಖೆಯಲ್ಲಿ ವೈದ್ಯರ, ಪ್ಯಾರಾ ಮೆಡಿಕಲ್, ಆರೋಗ್ಯ ಕಾರ್ಯಕರ್ತೆಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹೆಚ್ಚಳಕ್ಕೆ ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ ಸೇವೆಯಲ್ಲಿರುವ ಸಿಬ್ಬಂದಿ ಹಾಗೂ ಮುಂಬರುವ ಸಿಬ್ಬಂದಿಗೆ ಗುಣಾತ್ಮಕ ತರಬೇತಿ ನೀಡಿ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡಲು ಮತ್ತು ಸರ್ಕಾರಿ ಆಸ್ಪತ್ರೆಗಳ ಬಗೆಗೆ ಸಾರ್ವಜನಿಕರಲ್ಲಿ ಉತ್ತಮ ಅಭಿಪ್ರಾಯ ಮೂಡಿಸಿ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಅವರು ಹೇಳಿದರು.
ಕೇಂದ್ರ ಸಂಸದೀಯ ಸಚಿವರು ಆಸಕ್ತಿ ವಹಿಸಿ ಉತ್ತರ ಕರ್ನಾಟಕ ಭಾಗದಲ್ಲಿ ಏಮ್ಸ್ ಆಸ್ಪತ್ರೆಯನ್ನು ಆರಂಭಿಸಲು ಪ್ರಯತ್ನಿಸುತ್ತಿದ್ದು, ಏಮ್ಸ್ನಂತಹ ಉನ್ನತ ಆರೋಗ್ಯ ಸಂಸ್ಥೆಗಳು ಈ ಭಾಗಕ್ಕೆ ಬರುವುದರಿಂದ ಇಲ್ಲಿನ ಆರೋಗ್ಯ ಸಮಸ್ಯೆಗಳ ಪರಿಹಾರದೊಂದಿಗೆ ಆರೋಗ್ಯವಂತ ಸಮಾಜ ರೂಪುಗೊಳ್ಳಲು ಸಹಕಾರಿಯಾಗುತ್ತದೆ ಎಂದು ಸಚಿವರು ಹೇಳಿದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ಮಾತನಾಡಿದರು.