ಧಾರವಾಡ: ದೇಶಾದ್ಯಂತ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆ ಕಂಟೇನ್‌ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿ ಸಹಜ ಪ್ರದೇಶಗಳಲ್ಲಿ ವಿವಾಹಗಳನ್ನು ನಡೆಸಲು ರಾಜ್ಯ ಸರ್ಕಾರವು ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಸೂಚಿಸಿದೆ.
ಎಲ್ಲ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಗಳು ಮತ್ತು ಇತರ ಸಭೆಗಳನ್ನು ಮೇ 4 ರಿಂದ ಜಾರಿಗೆ ಬರುವಂತೆ ಎರಡು ವಾರಗಳ ಅವಧಿಗೆ ನಿಷೇಧಿಸಲಾಗಿದೆ.
ಹೇಗಿದೆ ಮಾರ್ಗದರ್ಶಿ ಸೂತ್ರ?
ಮದುವೆಗೆ ಸಂಬಂಧಿಸಿದ ಕೂಟಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು, ಗರಿಷ್ಠ 50ಕ್ಕಿಂತ ಹೆಚ್ಚು ಸಂಖ್ಯೆಯ ಅತಿಥಿಗಳು ಭಾಗವಹಿಸಬಾರದು ಎಂದು ಸೂಚಿಸಲಾಗಿದೆ.
ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ, ಸಮುದಾಯ ಭವನ , ಧಾರ್ಮಿಕ ಸ್ಥಳಗಳಲ್ಲಿ ಮದುವೆಗಳನ್ನು ಹಮ್ಮಿಕೊಳ್ಳಬಾರದು. ವಿವಾಹ ಆಯೋಜನೆಗೆ ಯಾವುದೇ ವಿಶೇಷ ಅನುಮತಿ ಅಗತ್ಯವಿಲ್ಲ. ವಿವಾಹದ ಉದ್ದೇಶಕ್ಕಾಗಿ ಯಾವುದೇ ಅಂತರ ರಾಜ್ಯಗಳ ಸಂಚಾರಕ್ಕೆ ಅನುಮತಿ ಇಲ್ಲ ಎಂದಿದೆ.
ಉಲ್ಲಂಘಿಸಿದರೆ ಕ್ರಮ ಏನು ಗೊತ್ತಾ?
ಈ ಸಲಹೆಗಳನ್ನು ಉಲ್ಲಂಘಿಸುವವರ ವಿರುದ್ಧ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ, 1897 (1897 ರ ಕೇಂದ್ರ ಸಾಂಕ್ರಾಮಿಕ ಕಾಯ್ದೆ -3), ಕರ್ನಾಟಕ ಸಾಂಕ್ರಾಮಿಕ ರೋಗಗಳು ಕೋವಿಡ್-19 ನಿಯಮಗಳು 2020 ರ ಪ್ರಕಾರ ಕ್ರಮವನ್ನು ಜರುಗಿಸಲಾಗುತ್ತದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಜಿಲ್ಲಾಧಿಕಾರಿ ದೀಪಾ ಚೋಳನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.