ಧಾರವಾಡ: ಜಿಲ್ಲಾಸ್ಪತ್ರೆ ಲಸಿಕಾ ಕೇಂದ್ರದಲ್ಲಿ ಆರಂಭದಲ್ಲಿ ಕೋವಿಡ್ ವ್ಯಾಕ್ಸಿನ್ಗಾಗಿ ನೂಕು ನುಗ್ಗಲು ಉಂಟಾಗಿತ್ತು. ಮೊದಮೊದಲು ಶಾಂತ ರೀತಿಯಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ಸಾರ್ವಜನಿಕರು, ಕೂಪನ್ ಕೊಡಲು ಆಸ್ಪತ್ರೆ ಸಿಬ್ಬಂದಿ ಬರುತ್ತಿದ್ದಂತೆ ನೂಕಾಟ ತಳ್ಳಾಟ ನಡೆಸಿದ್ದರು. ಜನದಟ್ಟಣೆ ಹಿನ್ನೆಲೆ ಬಾಗಿಲು ತೆರೆದು ಲಸಿಕೆ ಆರಂಭಿಸಿದರು.
ಕೇವಲ 50 ಡೋಸ್ ಇರುವ ಕಾರಣ 50 ಜನರಿಗೆ ಮಾತ್ರ ಎರಡನೇ ಡೋಸ್ ಲಸಿಕೆ ನೀಡಲಾಗುವುದು ಎಂದು ಜಿಲ್ಲಾಸ್ಪತ್ರೆ ಸಿಬ್ಬಂದಿ ಹೇಳಿದರು. ಪರಿಣಾಮ, ವ್ಯಾಕ್ಸಿನ್ಗಾಗಿ ಬೆಳಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತಿದ್ದ ಜನರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜನರನ್ನು ನಿಯಂತ್ರಿಸಲು ಪೊಲೀಸರು ಮಧ್ಯೆ ಪ್ರವೇಶಿಸಿದರು.
ಓದಿ: ಕೆಆರ್ಎಸ್ನಿಂದ ತಮಿಳುನಾಡಿಗೆ ನೀರು ಹರಿಸುವುದಕ್ಕೆ ಖಂಡನೆ.. ಮಂಡ್ಯದಲ್ಲಿ ರೈತರ ಪ್ರತಿಭಟನೆ
ಜಿಲ್ಲಾ ಶಸ್ತ್ರ ಚಿಕಿತ್ಸಕ ಶಿವುಕುಮಾರ ಮಾನಕರ ಭೇಟಿ:
ಜಿಲ್ಲಾಸ್ಪತ್ರೆ ವ್ಯಾಕ್ಸಿನ್ ಕೇಂದ್ರದಲ್ಲಿ ನೂಕು ನುಗ್ಗಲು ಹಿನ್ನೆಲೆ ವ್ಯಾಕ್ಸಿನ್ ಕೇಂದ್ರಕ್ಕೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಶಿವುಕುಮಾರ ಮಾನಕರ ಭೇಟಿ ನೀಡಿ ಪರಿಶೀಲಿಸಿರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಇವತ್ತು ಮತ್ತು ನಾಳೆ ರಜೆಯ ದಿನ. ಹೀಗಾಗಿ ಜನದಟ್ಟಣೆ ಹೆಚ್ಚಾಗುವುದು ಸಹಜ.
ಇವತ್ತು ಎರಡೂ ಲಸಿಕೆಯ ತಲಾ 500 ಡೋಸ್ ಇದೆ ಎಂದು ಸ್ಪಷ್ಟೀಕರಣ ನೀಡಿದರು. ಜನರನ್ನು ಈಗ ಎಣಿಕೆ ಮಾಡಿದ್ದೇವೆ. ಬಂದಿರುವ ಎಲ್ಲರಿಗೂ ಲಸಿಕೆ ಸಿಗುತ್ತದೆ. ವ್ಯಾಕ್ಸಿನ್ ಈಗ ಬಂದಿದೆ. ವ್ಯಾಕ್ಸಿನ್ ಬಂದ ಬಳಿಕವೇ ಎಷ್ಟಿದೆ ಎನ್ನುವುದು ನಮಗೆ ಗೊತ್ತಾಗುತ್ತದೆ ಎಂದು ಸಮಜಾಯಿಷಿ ನೀಡಿದರು.