ಧಾರವಾಡ: ಕೊರೊನಾ ಮಹಾಮಾರಿ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಅದಕ್ಕೆ ನಮ್ಮ ರಾಜ್ಯ ಕೂಡ ಹೊರತಾಗಿಲ್ಲ. ವೈರಸ್ ಹರಡುವಿಕೆ ನಿಯಂತ್ರಿಸಲು ಕೊರೊನಾ ವಾರಿಯರ್ಸ್ ಆಗಿ ಲಕ್ಷಾಂತರ ಮಂದಿ ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸುತ್ತಿದ್ದು, ಜಿಲ್ಲೆಯ ಈ ಮಹಿಳಾ ಅಧಿಕಾರಿಗಳು ಹಗಲಿರುಳು ಎನ್ನದೇ ಕೆಲಸ ಮಾಡುತ್ತಿದ್ದಾರೆ.
ಮಹಿಳೆ ಅಬಲೆ ಅಲ್ಲ, ಸಬಲೇ ಎಂಬ ಮಾತಿದೆ. ಹೆಣ್ಣು ಮನಸು ಮಾಡಿದ್ರೆ ಎಂತ ಜವಾಬ್ದಾರಿಯನ್ನು ಕೂಡಾ ಯಶಸ್ವಿಯಾಗಿ ನಿರ್ವಹಣೆ ಮಾಡ್ತಾಳೆ. ದೇಶ ಕೊರೊನಾ ಮಹಾಮಾರಿ ವಿರುದ್ಧ ಯುದ್ಧ ಸಾರಿದಾಗ ಅನೇಕ ಕಡೆಗಳಲ್ಲಿ ಮುಂದಡಿ ಇಟ್ಟು ಅಚ್ಚರಿ ಮೂಡಿಸಿದ ಅನೇಕ ಮಹಿಳಾ ಅಧಿಕಾರಿಗಳಿದ್ದಾರೆ. ಇಂತಹವರ ಸಾಲಿನಲ್ಲಿ ಜಿಲ್ಲೆಯ ಮೂವರು ಅಧಿಕಾರಿಗಳು ನಿಲ್ಲುತ್ತಾರೆ.
ಜಿಲ್ಲಾಧಿಕಾರಿ ದೀಪಾ ಚೋಳನ್, ಎಸ್ಪಿ ವರ್ತಿಕಾ ಕಟಿಯಾರ್ ಹಾಗೂ ಎಸಿಪಿ ಅನುಷಾ ಹಗಲು - ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಮಹಾಮಾರಿ ಎಲ್ಲರಲ್ಲೂ ಆತಂಕ, ಭಯ ಹುಟ್ಟಿಸಿದ ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ತಮ್ಮ ಕೆಲಸದ ಮೂಲಕ ಜನ ಮನ್ನಣೆ ಗಳಿಸಿದ್ದಾರೆ.
ವೈಯಕ್ತಿಕ ಜೀವನ ಬದಿಗಿಟ್ಟು ಬೆಳಗ್ಗೆಯಿಂದ ರಾತ್ರಿವರೆಗೂ ಹತ್ತಾರು ಸಭೆಗಳನ್ನು ನಡೆಸಿ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರಗಳ ಆದೇಶಗಳ ಪಾಲನೆ, ಲಾಕ್‌ಡೌನ್ ಬಿಗಿ ಭದ್ರತೆ, ಸೋಂಕು ಪಾಸಿಟಿವ್, ಶಂಕಿತ ಪ್ರಕರಣಗಳ ಆರೋಗ್ಯ ಪರಿಶೀಲನೆಯನ್ನು ಡಿಸಿ ದೀಪಾ ಚೋಳನ್ ಮಾಡುತ್ತಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಅವರು ಕೂಡಾ ಗ್ರಾಮೀಣ ಭಾಗಕ್ಕೆ ಕೊರೊನಾ ಹರಡದಂತೆ ಲಕ್ಷ್ಮಣ ರೇಖೆ ಹಾಕಿದ್ದಾರೆ. ಎಸ್ಪಿ ಅವರ ಕಠಿಣ ಕ್ರಮಗಳಿಂದಾಗಿ ಧಾರವಾಡ ಜಿಲ್ಲೆ ಗ್ರಾಮೀಣ ಪ್ರದೇಶ ಕೊರೊನಾದಿಂದ ಸುರಕ್ಷಿತವಾಗಿದೆ. ನಗರದಲ್ಲಿನ ಬಂದೂಬಸ್ತ್, ಲಾಕ್‌ಡೌನ್ ಪಾಲನೆ ಕುರಿತು ಎಸಿಪಿ ಅನುಷಾ ಸಿಟಿ ರೌಂಡ್ಸ್ ಮಾಡಿ ಜನರಿಗೆ ತಿಳಿವಳಿಕೆ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಆ ಮೂಲಕ ಮೂವರು ಅಧಿಕಾರಿಗಳು ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.