ಧಾರವಾಡ: ಕಳೆದ ಎರಡು ಮೂರು ದಿನಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು, ಇದರಿಂದಾಗಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಬಹಳಷ್ಟು ಮನೆಗಳಿಗೆ ಹಾನಿಯಾಗಿದೆ ಮತ್ತು ಬೆಳೆ ಹಾನಿಯಾಗಿದೆ. ಸರ್ಕಾರದಿಂದ ನಷ್ಟದ ಪರಿಹಾರ ನೀಡಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಅವರು ನವಲಗುಂದ ತಾಲೂಕಿನ ಯಮನೂರ ಹತ್ತಿರದ ಬೆಣ್ಣಿ ಹಳ್ಳದಲ್ಲಿ ಎನ್ಡಿಆರ್ಎಫ್ ತಂಡ, ಜೀವರಕ್ಷಣೆ ಕುರಿತು ಮಾಡಿದ ಅಣಕು ಪ್ರದರ್ಶನ ವೀಕ್ಷಣೆ ಮಾಡಿದ ನಂತರ ಮಾತನಾಡಿದರು.
ಎನ್.ಡಿ.ಆರ್.ಎಫ್ ತಂಡದೊಂದಿಗೆ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಘ, ಯುವಕ ಮಂಡಳ, ಸಂಸ್ಥೆಗಳು ಸಾಮಾಜಿಕ ಸೇವೆಗೆ ನಮ್ಮೊಂದಿಗೆ ಕೈ ಜೋಡಿಸಿದ್ದಾರೆ. ತುರ್ತು ಪರಿಹಾರ ಕಾರ್ಯಗಳಿಗೆ ತಕ್ಷಣಕ್ಕೆ ನೆರವಾಗಲು ಈಜು, ಧೈರ್ಯ, ಕ್ರಿಯಾಶೀಲತೆ ಇರುವ ಮತ್ತು ಸ್ಥಳೀಯವಾಗಿ ಗ್ರಾಮಗಳಲ್ಲಿಯೇ ಲಭ್ಯವಿರುವ ಯುವಕರ ತಂಡಗಳನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ವಿಶೇಷ ಮುತುವರ್ಜಿ ವಹಿಸಿ ಸಿದ್ಧಗೊಳಿಸಿದ್ದಾರೆ. ಇದೊಂದು ವಿಶೇಷ ಪ್ರಯತ್ನವಾಗಿದೆ.
ನವಲಗುಂದ ತಾಲೂಕಿಗೆ ಸೀಮಿತವಾಗಿ 85 ಯುವಕರ ತಂಡ ಹಾಗೂ ಧಾರವಾಡ ಜಿಲ್ಲೆಗೆ 200 ಯುವಕ ತಂಡ ರಚಿಸಿ, ಎನ್ಡಿಆರ್ಎಫ್ ತಂಡದೊಂದಿಗೆ ಕೈ ಜೋಡಿಸಿರುವುದು ಶ್ಲಾಘನೀಯವಾಗಿದ್ದು, ಅವರಿಗೆ ಸಚಿವರು ಅಭಿನಂದನೆ ತಿಳಿಸಿದರು.
ಪ್ರವಾಹ ಪರಿಸ್ಥಿತಿ ಎದುರಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಅಧಿಕಾರಿಗಳು ಹಗಲಿರಳು ಶ್ರಮಿಸುತ್ತಿದ್ದಾರೆ. ಅದರ ಜೊತೆಗೆ ಜನಸಾಮಾನ್ಯರು, ಸಂಘ ಸಂಸ್ಥೆಗಳು ಸಹಕಾರ ನೀಡುತ್ತಿರುವದಿಂದ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಕಾರ್ಯಗಳು ಯಶಸ್ವಿಯಾಗುವಂತೆ ಮಾಡೋಣ ಎಂದು ಸಚಿವರು ತಿಳಿಸಿದರು.
ಬೆಣ್ಣಿ ಹಳ್ಳ ಹಾಗೂ ತುಪ್ಪರಿ ಹಳ್ಳಕ್ಕೆ ಶಾಸಕರಾದ ಶಂಕರ್ ಪಾಟೀಲ ಮುನೆನಕೊಪ್ಪ ಹಾಗೂ ಅಮೃತ ದೇಸಾಯಿ ಅವರ ಸಹಯೋಗದಲ್ಲಿ ಒಂದು ಸಭೆ ನಡೆಸಿ, ಹಳ್ಳಗಳ ಸಮಸ್ಯೆ ಶಾಶ್ವತ ಪರಿಹಾರಕ್ಕಾಗಿ ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ನವಲಗುಂದ ತಹಶೀಲ್ದಾರ ನವೀನ ಹುಲ್ಲೂರ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ, ನವಲಗುಂದ ತಾಲೂಕಿನ ಅತಿವೃಷ್ಟಿ ನೋಡಲ್ ಅಧಿಕಾರಿ ಸದಾಶಿವ ಮರ್ಜಿ ಸೇರಿದಂತೆ ಇತರ ಅಧಿಕಾರಿಗಳು, ವಿವಿಧ ಜನಪ್ರತಿನಿಧಿಗಳ ಇದ್ದರು.