ಕಲಘಟಗಿ(ಧಾರವಾಡ): ತಾಲೂಕಿನ ಸೂರಶೆಟ್ಟಿಕೊಪ್ಪ, ನಾಗನೂರ, ದ್ಯಾಮಪುರ ಗ್ರಾಮಗಳಿಗೆ ತಿಂಗಳಿಂದ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂದು ದೂರಿ ಪಟ್ಟಣದಲ್ಲಿರುವ ಕೆಇಬಿಗೆ ರೈತರು ಮುತ್ತಿಗೆ ಹಾಕಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ಹಲವಾರು ಬಾರಿ ವಿದ್ಯುತ್ ನೀಡಿ ಎಂದು ಮೌಖಿಕವಾಗಿ ಹಾಗೂ ಲಿಖಿತ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಎಲ್ಲಾ ರೈತರ ಜಮೀನಿನಲ್ಲಿ ಗೋವಿನಜೋಳ, ಶೇಂಗಾ, ಕಬ್ಬು ಬೆಳೆ ಬೆಳೆದಿದ್ದು, ಬಿಸಿಲಿಗೆ ನೀರಿಲ್ಲದೆ ಒಣಗುತ್ತಿವೆ. ಕೂಡಲೇ ವಿದ್ಯುತ್ ಪುರೈಕೆ ಮಾಡಬೇಕು ಎಂದು ರೈತರು ಒತ್ತಾಯಿಸಿದರು.
4 ಗಂಟೆಗಳ ಕಾಲ ಕೆಇಬಿ ಇಲಾಖೆ ಮುಂದೆ ರೈತರು ತಾತ್ಕಾಲಿಕ ಧರಣಿ ನಡೆಸಿ ಪ್ರತಿಭಟನೆ ಮಾಡಿದರು. ಆದರೂ ಸ್ಥಳಕ್ಕೆ ಯಾವ ಅಧಿಕಾರಿಗಳು ಬಾರದ ಹಿನ್ನೆಲೆ ರೈತರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.