ಧಾರವಾಡ: ಕೊರೊನಾ ತಪಾಸಣೆ ವ್ಯಾಪಕವಾಗಿ ಹೆಚ್ಚಿಸಿ, ಅಮೂಲ್ಯ ಜೀವಗಳನ್ನು ರಕ್ಷಿಸಲು ಸರ್ಕಾರ, ಜಿಲ್ಲಾಡಳಿತ ನಿರಂತರವಾಗಿ ಶ್ರಮಿಸುತ್ತಿದೆ. ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡವಾಗಿ ಈ ಹೋರಾಟ ಮುಂದುವರಿಸಬೇಕು. ನಗರ ಮತ್ತು ಗ್ರಾಮೀಣ ಭಾಗಗಳ ಜನರನ್ನು ಸ್ವ್ಯಾಬ್ ಸಂಗ್ರಹಣೆ ಕೇಂದ್ರಗಳಿಗೆ ಕರೆತರಲು ಅಗತ್ಯ ವಾಹನಗಳನ್ನು ಒದಗಿಸಲಾಗುವುದು. ಆರೋಗ್ಯ, ಕಂದಾಯ, ಗ್ರಾಮೀಣಾಭಿವೃದ್ಧಿ, ಪೌರಾಡಳಿತ, ಪ್ರಾದೇಶಿಕ ಸಾರಿಗೆ ಇಲಾಖೆ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಈ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕು ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು.
ಇತ್ತೀಚೆಗೆ ವೈದ್ಯಾಧಿಕಾರಿಗಳು ತಮ್ಮ ಹೋರಾಟವನ್ನು ನ್ಯಾಯಿಕ ಮಾರ್ಗದಲ್ಲಿ ನಡೆಸಿ ತಮ್ಮ ಕರ್ತವ್ಯ ನಿರ್ವಹಣೆಯ ಜೊತೆಗೆ ಬೇಡಿಕೆಗಳನ್ನು ಕೂಡ ಸರ್ಕಾರದ ಗಮನಕ್ಕೆ ತಂದಿರುವುದು ಮಾದರಿಯಾಗಿದೆ. ಆದರೆ, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಈ ಕಠಿಣ ಸಂದರ್ಭದಲ್ಲಿ ಕೊರೊನಾ ವ್ಯಾಪಕವಾಗಿರುವ ಸಂದರ್ಭದಲ್ಲಿ ಮುಷ್ಕರ ನಿರತರಾಗಿರುವುದನ್ನು ಒಪ್ಪಲು ಸಾಧ್ಯವಾಗದು.
ಸೋಮವಾರದವರೆಗೆ ಅವರು ಕರ್ತವ್ಯಕ್ಕೆ ಮರಳಲು ಸೂಚನೆ ನೀಡಿ ಕಾಲಾವಕಾಶ ಕಲ್ಪಿಸಿ, ಆಗಲೂ ಹಾಜರಾಗದಿದ್ದರೆ, ನಿಯಮಾನುಸಾರ ಬೇರೆಯವರನ್ನು ನೇಮಿಸಿಕೊಂಡು ಅಗತ್ಯವಾಗಿರುವ ಕಾರ್ಯಗಳಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಆರೋಗ್ಯ ಇಲಾಖೆಯಲ್ಲಿ ಮಂಜೂರಾಗಿರುವ ಹುದ್ದೆಗಳು ಖಾಲಿ ಇದ್ದರೆ, ಆ ಹುದ್ದೆಗಳಿಗೆ ತಾತ್ಕಾಲಿಕವಾಗಿ ಆರು ತಿಂಗಳ ಅವಧಿಗೆ ತಕ್ಷಣ ನೇಮಕಾತಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಕೋವಿಡ್ ತಪಾಸಣೆ ಹೆಚ್ಚಿಸಿ: ಜಿಲ್ಲೆಯ ಎಲ್ಲ ತಹಸೀಲ್ದಾರ್ ಕಚೇರಿಗಳು, ಮಹಾನಗರಪಾಲಿಕೆ, ಇತರ ನಗರ ಸ್ಥಳೀಯ ಸಂಸ್ಥೆಗಳು, ಮಾರುಕಟ್ಟೆ, ರೈಲು, ಬಸ್ ನಿಲ್ದಾಣಗಳಿಗೆ ಆಗಮಿಸುವ ಸಾರ್ವಜನಿಕರು, ಆಟೋ ರಿಕ್ಷಾ ಚಾಲಕರು, ಅಪಾರ್ಟ್‌ಮೆಂಟ್ ಅಸೋಸಿಯೇಷನ್ನುಗಳು ಸದಸ್ಯರನ್ನು ಹಾಗೂ ಆಸ್ಪತ್ರೆಗಳಿಗೆ ಬರುವ ರೋಗಿಗಳು ಹಾಗೂ ಅವರ ಜೊತೆಗೆ ಬರುವ ಅಟೆಂಡರ್ ಗಳನ್ನು ಕೂಡ ಕೋವಿಡ್ ತಪಾಸಣೆಗೆ ಒಳಪಡಿಸಬೇಕು. ತ್ವರಿತ ಮತ್ತು ಅಧಿಕ ತಪಾಸಣೆಯಿಂದ ಕೊರೊನಾ ನಿಯಂತ್ರಣ ಸಾಧ್ಯವಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.