ಧಾರವಾಡ: ಜಿಲ್ಲೆಯಲ್ಲಿ ನಾಳೆಯಿಂದ (ನ.20 ರಿಂದ 23 ವರೆಗೆ) ಮುಂದಿನ ನಾಲ್ಕು ದಿನಗಳವರೆಗೆ ಮಳೆ (Heavy rain in Dharwad) ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ನಾಳೆ ಜಿಲ್ಲೆಯ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಿ (Dhawad Schools closed due to rain) ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಇಂದು ಸಂಜೆ ಆದೇಶ ಹೊರಡಿಸಿದ್ದಾರೆ.
ಜಿಲ್ಲಾಡಳಿತದಿಂದ ಮಳೆ ಹಾನಿ ತಡೆಯಲು ಅಗತ್ಯ ಕ್ರಮ ವಹಿಸಿದ್ದು, ಕೆರೆ ಕಟ್ಟೆಗಳ ಕಡೆ ಜನ, ಜಾನುವಾರು ಹೋಗದಂತೆ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಜಿಲ್ಲೆಯ ಎಲ್ಲ ಶಾಲಾ ಮುಖ್ಯಸ್ಥರಿಗೆ, ವಿದ್ಯಾರ್ಥಿಗಳ ಪಾಲಕರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ ವಾಡಿಕೆಯಂತೆ 26.3 ಮೀ.ಮೀ ಮಳೆಯಾಗಬೇಕಿತ್ತು. ಆದರೆ ಅಕಾಲಿಕ ಮಳೆಯಿಂದ ಈ ಬಾರಿ 70.1 ಮೀ.ಮೀ ಮಳೆಯಾಗಿದೆ. ಅಳ್ನಾವರ ತಾಲೂಕಿನಲ್ಲಿ ಅತೀ ಹೆಚ್ಚು ಮಳೆಯಾಗಿದೆ ಎಂದು ಈ ಮೊದಲು ಮಾಹಿತಿ ನೀಡಿದ್ದರು.
ಮಳೆಯಿಂದ ಉಂಟಾದ ಹಾನಿ:
ಅಕಾಲಿಕ ಮಳೆಗೆ ಭಾಗಶಃ 188 ಮನೆಗಳು ಅಪಾಯಕ್ಕೆ ಸಿಲುಕಿದ್ದು, ಅದರಲ್ಲಿ 22 ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಇಲ್ಲಿಯವರೆಗೆ 7,390 ಹೆಕ್ಟೇರ್ ಕೃಷಿ ಬೆಳೆ ಹಾಗೂ 1,210 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾಳಾಗಿವೆ. ಸುಮಾರು 28 ಕಿ.ಮೀ.ನಷ್ಟು ರಸ್ತೆಗಳು ಮಳೆಯಿಂದ ಹದಗೆಟ್ಟಿವೆ. ಹೊಲ್ತಿಕೋಟೆ ಗ್ರಾಮದ ಕೆರೆ ಒಡೆದಿದ್ದು, 15 ಲಕ್ಷ ರೂ.ಗಳಲ್ಲಿ ದುರಸ್ತಿ ಮಾಡಲಾಗುವುದು ಎಂದರು.
ಇದನ್ನೂ ಓದಿ: ಸೇತುವೆ ದಾಟುವಾಗ ಕೊಚ್ಚಿ ಹೋದ ಬೈಕ್: ಕೂದಲೆಳೆ ಅಂತರದಲ್ಲಿ ಸವಾರರು ಪಾರು- ವಿಡಿಯೋ