ಧಾರವಾಡ: ನಮ್ಮ ಮನೆಯ ಮಕ್ಕಳಿಗೆ ನೀಡುವ ಪ್ರೀತಿಯನ್ನೇ ಬಾಲಮಂದಿರದ ಮಕ್ಕಳಿಗೂ ನೀಡುವುದು ಮುಖ್ಯ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಈಶಪ್ಪ ಭೂತೆ ಅಭಿಪ್ರಾಯಪಟ್ಟರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ 2019-20 ನೇ ಸಾಲಿನ ಮಕ್ಕಳ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ 'ಚಿಣ್ಣರ ಚಿಲಿಪಿಲಿ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಈಶಪ್ಪ ಭೂತೆ, ನಮ್ಮ ಮನೆಯ ಮಕ್ಕಳಿಗೆ ನೀಡುವ ಪ್ರೀತಿಯನ್ನೇ ಬಾಲಮಂದಿರದ ಮಕ್ಕಳಿಗೂ ನೀಡುವುದು ಮುಖ್ಯ. ಹೆತ್ತವರು ಮಾಡಿದ ತಪ್ಪಿಗೆ ಎಳೆಯ ಮಕ್ಕಳು ಶಿಕ್ಷೆ ಅನುಭವಿಸಬಾರದು. ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಅವರ ಭವಿಷ್ಯ ಉಜ್ವಲಗೊಳಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಬಾಲಮಂದಿರದ ಮಕ್ಕಳು ಉತ್ತಮ ವಿದ್ಯಾಭ್ಯಾಸ ಮಾಡಿ ವೇದಿಕೆಯಲ್ಲಿರುವ ಗಣ್ಯರಂತೆ ಐಎಎಸ್, ಐಪಿಎಸ್ ಅಧಿಕಾರಿಗಳು, ನ್ಯಾಯಾಧೀಶರು, ಸಾಮಾಜಿಕ ಚಿಂತಕರು, ಹೋರಾಟಗಾರರಾಗಿ ರೂಪುಗೊಂಡು ಸಮಾಜಕ್ಕೆ ಆಸ್ತಿಯಾಗಬೇಕು ಎಂದರು.
ಮನ ಸೆಳೆದ ಮಕ್ಕಳ ವೇಷಭೂಷಣ:
ವೀಕ್ಷಣಾಲಯದ ಮಕ್ಕಳು ಆಕರ್ಷಕ ವೇಷಭೂಷಣದಲ್ಲಿ ಕಂಗೊಳಿಸಿ ನೃತ್ಯ, ನಾಟಕ ಸೇರಿದಂತೆ ಮಹನೀಯರ ವೇಷಭೂಷಣ ಧರಿಸಿ ನೆರೆದಿದ್ದ ಗಣ್ಯರ ಮುಂದೆ ನಿರ್ಭಯವಾಗಿ ವೇದಿಕೆಯೇರಿ ಪ್ರದರ್ಶನ ನೀಡಿದ್ರು.
ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ಎಸ್. ಚಿಣ್ಣನ್ನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಜೆಎಂಎಫ್‌ಸಿ 4ನೇ ಹೆಚ್ಚುವರಿ ನ್ಯಾಯಾಧೀಶ ನಿತಿನ್ ಯಶವಂತರಾವ್, ಡಿವೈಎಸ್ ಪಿ ರವಿ ನಾಯಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಕಾಂತ್ ಕುಲಕರ್ಣಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ , ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣ ಸಂಗಳದ ಮತ್ತಿತರರು ವೇದಿಕೆಯಲ್ಲಿದ್ದರು.