ಧಾರವಾಡ: ಹಾಲಿ ಶಾಸಕರೊಬ್ಬರು ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ ಎಂಬ ವಿಚಾರ ಜಿಲ್ಲಾದ್ಯಂತ ಸದ್ದು ಮಾಡುತ್ತಿದೆ. ಧಾರವಾಡದ ಹಾಲಿ ಶಾಸಕರೊಬ್ಬರು ಕಾಂಗ್ರೆಸ್ ಸೇರುತ್ತಾರೆ ಎಂದು ಕಾಂಗ್ರೆಸ್ ಹು ಧಾ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ ಮಾಹಿತಿ ನೀಡಿದ್ದಾರೆ.
ಹಾಲಿ ಶಾಸಕರೊಬ್ಬರು ಕಾಂಗ್ರೆಸ್ ಸೇರುವ ನಿರೀಕ್ಷೆ: ಧಾರವಾಡ ಜಿಲ್ಲಾ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಇಂದು ಮಾತನಾಡಿದರು. ಬಿಜೆಪಿಯ ಸಾಕಷ್ಟು ಜನ ಕಾಂಗ್ರೆಸ್ ಸೇರುವ ನಿರೀಕ್ಷೆ ಇದೆ. ಜಿಲ್ಲೆಯ ಹಾಲಿ ಶಾಸಕರೊಬ್ಬರೂ ನಮ್ಮವರನ್ನು ಸಂಪರ್ಕಿಸಿದ್ದಾರೆ. ಈ ಬಗ್ಗೆ ನಮಗೆ ಮಾಹಿತಿ ಬಂದಿದೆ. ಯಾರು ಅಂತಾ ಗೊತ್ತಿಲ್ಲ ಆದರೆ, ಜಿಲ್ಲೆಯ ಒಬ್ಬ ಮಾಜಿ ಶಾಸಕರು ಕಾಂಗ್ರೆಸ್ ಹಿರಿಯ ಮುಖಂಡರನ್ನೂ ಸಂಪರ್ಕಿಸಿದ್ದಾರೆ ಎಂದು ತಿಳಿಸಿದರು.
ಯಾರು ಅಂತಾ ವರಿಷ್ಠರಿಗೆ ಗೊತ್ತು: ಅವರು ಯಾರು ಅಂತಾ ನಮ್ಮ ವರಿಷ್ಠರಿಗೆ ಗೊತ್ತು. ಮುಂದೆ ಜಿಲ್ಲೆಗೆ ವರಿಷ್ಠರ ಪ್ರವಾಸ ಇದೆ. ಅವರು ಆಗ ಹೇಳುತ್ತಾರೆ. ಬೇರೆಯವರು ಯಾರೇ ಬಂದರೂ ಜಿಲ್ಲಾ ಮುಖಂಡರನ್ನು ಕೇಳಬೇಕು. ಜಿಲ್ಲಾಧ್ಯಕ್ಷರನ್ನು ಕೇಳಲೇಬೇಕು. ಆದೇ ಬೇರೆಯವರ ಸೇರ್ಪಡೆ ಬಗ್ಗೆ ನಮ್ಮನ್ನು ಯಾರೂ ಕೇಳಿಲ್ಲ ಎಂದು ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ ಹೇಳಿದರು.
ಮಾಜಿ ಎಂಎಲ್‌ಸಿ ಸೇರ್ಪಡೆ ವಿಚಾರ ಗೊತ್ತಿಲ್ಲ: ಬಿಜೆಪಿಯ ಮಾಜಿ ಎಂಎಲ್‌ಸಿ ಮೋಹನ ಲಿಂಬಿಕಾಯಿ ಅವರು ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅಧಿಕೃತವಾಗಿ ಯಾವುದೂ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷದಿಂದ ಅವರ ಸೇರ್ಪಡೆ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ನಾನು ಜಿಲ್ಲಾಧ್ಯಕ್ಷ ನನ್ನನ್ನು ಬಂದು ಅವರು ಭೇಟಿಯೂ ಆಗಿಲ್ಲ ಎಂದು ಸ್ಪಷ್ಟ ಪಡಿಸಿದರು.
ಬಂದರೆ 11 ಜನ ಆಕಾಂಕ್ಷಿಗಳಿಗೆ ಅನ್ಯಾಯ: ಅವರು ಬಂದರೆ ನಮ್ಮವರಿಗೆ ಅನ್ಯಾಯ ಆಗುವುದು ನಿಜ. ಈಗಾಗಲೇ ನಮ್ಮಲ್ಲಿ 11 ಜನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿತ ಅಭ್ಯರ್ಥಿಗಳಿದ್ದಾರೆ. ಹು-ಧಾ ಪಶ್ಚಿಮ ಕ್ಷೇತ್ರದಲ್ಲಿ 11 ಜನ ಆಕಾಂಕ್ಷಿಗಳು ಬಹಳ ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದು, ಅನೇಕ ದಿನಗಳಿಂದ ಕೆಲಸ ಮಾಡಿದ್ದಾರೆ. ಯಾರೇ ಬರಲಿ, ಆದರೆ, ಈಗೀರುವ 11 ಜನರಲ್ಲಿ ಅವಕಾಶ ಕೊಡಬೇಕು ಎಂದು ಇದೇ ವೇಳೆ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ ಒತ್ತಾಯಿಸಿದರು.
ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್:ಪಕ್ಷದಲ್ಲಿ ನಿಷ್ಠೆ ಕಾಪಾಡುವುದು ಬಹುಮುಖ್ಯವಾಗಿದೆ. ಕಾಂಗ್ರೆಸ್ ಹು-ಧಾ ಮಹಾನಗರ ಜಿಲ್ಲಾ ಅಧ್ಯಕ್ಷನಾಗಿದ್ದು, ನನ್ನ ಕರ್ತವ್ಯ ನಿಷ್ಠಾವಂತರ ಕಾರ್ಯಕರ್ತರಿಗೆ ಟಿಕೆಟ್ ಕೊಡಿಸುವದು ಆಗಿದೆ. ಈಗಾಗಲೇ ಮಾಹಿತಿ ಕೇಳಿದ್ದಾರೆ. ರಾಜ್ಯದ ಕಾಂಗ್ರೆಸ್ ಹಿರಿಯ ನಾಯಕರಿಗೆ ಕೊಡಬೇಕಾದ ಮಾಹಿತಿ ಕೊಟ್ಟಿದ್ದೇವೆ. ಈಗ ಮೋಹನ ಲಿಂಬಿಕಾಯಿ ಹೆಸರು ಕೇಳಿ ಬಂದಿದೆ. ಅವರು ಪಕ್ಷದ ಜಿಲ್ಲಾ ಕಚೇರಿ ಸಂಪರ್ಕಿಸಿಲ್ಲ. ಕೆಪಿಸಿಸಿಯಿಂದಲೂ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದರು.
11 ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿತರು ಒಗ್ಗಟ್ಟು:ಇನ್ನು ಆಕಾಂಕ್ಷಿತರು ಜಂಟಿಯಾಗಿ ಮಾತನಾಡಿ, 11 ಜನರಲ್ಲಿ ಯಾರಿಗೆ ಟಿಕೆಟ್ ಸಿಕ್ಕಿದ್ದರೂ, ಒಗ್ಗಟ್ಟಾಗಿ ಚುನಾವಣೆ ಎದುರಿಸಿ,ಗೆಲ್ಲುತ್ತೇವೆ. ಈ ಬಾರಿ ಶಾಸಕ ಅರವಿಂದ ಬೆಲ್ಲದ ಅವರನ್ನು ಸೋಲಿಸುವುದು 11 ಟಿಕೆಟ್ ಆಕಾಂಕ್ಷಿತರ ಗುರಿ ಆಗಿದೆ ಎಂದು ಅವರೆಲ್ಲ ಇದೇ ವೇಳೆ ಪ್ರಸ್ತಾಪಿಸಿದರು.
ಇದನ್ನೂಓದಿ:ಹಾಸನದಲ್ಲಿ ಕಣಕ್ಕಿಳಿಯಲಿದ್ದಾರಾ ಭವಾನಿ ರೇವಣ್ಣ? ಜೆಡಿಎಸ್ ಚುನಾವಣೆ ಲೆಕ್ಕಾಚಾರ ಏನು?