ಧಾರವಾಡ: ಸದೃಢ ಆರೋಗ್ಯ ಮತ್ತು ಸದೃಢ ದೇಹ ಹೊಂದಲು ಕ್ರೀಡಾ ಹವ್ಯಾಸ ಬೆಳೆಸಿಕೊಳ್ಳಬೇಕು. ಯೋಗ ಮತ್ತು ಕ್ರೀಡೆಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅರಣ್ಯ ಇಲಾಖೆ ಸಿಬ್ಬಂದಿ ಕ್ರೀಡಾ ಚಟುವಟಿಕೆಗಳಲ್ಲಿ ನಿತ್ಯ ಪಾಲ್ಗೊಳ್ಳುವುದರಿಂದ ಉತ್ತಮವಾಗಿ ಕರ್ತವ್ಯ ನಿರ್ವಹಿಸಲು ಅನುಕೂಲವಾಗುತ್ತದೆ ಎಂದು ಕರ್ನಾಟಕ ಸರ್ಕಾರದ ಗಣಿ ಮತ್ತು ಭೂವಿಜ್ಞಾನ ಹಾಗೂ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವ ಸಿ.ಸಿ.ಪಾಟೀಲ ಸಲಹೆ ನೀಡಿದ್ದಾರೆ.
ಅರಣ್ಯ ಇಲಾಖೆಯಿಂದ ಕ್ರೀಡಾ ಚಟುವಟಿಕೆಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ. 113ಕ್ಕೂ ಹೆಚ್ಚು ಕ್ರೀಡಾ ಸಾಧಕರನ್ನು ಅರಣ್ಯ ಇಲಾಖೆಗೆ ನೇಮಕ ಮಾಡಿಕೊಳ್ಳಲಾಗಿದೆ. ಪ್ರತಿ ವರ್ಷ ಜರುಗುವ ರಾಷ್ಟ್ರೀಯ ಅರಣ್ಯ ಕ್ರೀಡಾಕೂಟದಲ್ಲಿ ನಮ್ಮ ಇಲಾಖೆ ಸಿಬ್ಬಂದಿಗಳು ಉತ್ತಮ ಸಾಧನೆ ಮಾಡಿ ರಾಜ್ಯಕ್ಕೆ ಕೀರ್ತಿ ತರುತ್ತಿದ್ದಾರೆ. ಬರುವ ವರ್ಷದಲ್ಲಿ 25 ನೇ ರಾಷ್ಟ್ರೀಯ ಅರಣ್ಯ ಕ್ರೀಡಾಕೂಟ ಒಡಿಶಾ ರಾಜ್ಯದ ಭುವನೇಶ್ವರದಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ಧಾರವಾಡದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟವನ್ನು ಸಂಘಟಿಸಲಾಗಿದೆ ಎಂದು ತಿಳಿಸಿದರು.
ಇಂದಿನ ಕ್ರೀಡಾಕೂಟದಲ್ಲಿ ರಾಜ್ಯದ 13 ಅರಣ್ಯ ವೃತ್ತ ಹಾಗೂ ಅರಣ್ಯ ತರಬೇತಿ ಕೇಂದ್ರದ ತಂಡ ಸೇರಿದಂತೆ ಒಟ್ಟು 14 ತಂಡಗಳ 1,100 ಜನ ಸ್ಪರ್ಧಾಳುಗಳು ಭಾಗವಹಿಸಿದ್ದಾರೆ. ಒಳಾಂಗಣ ಮತ್ತು ಹೊರಾಂಗಣ ಸೇರಿದಂತೆ ಒಟ್ಟು 54 ಸ್ಪರ್ಧೆಗಳನ್ನು ಪುರುಷ ಹಾಗೂ ಮಹಿಳಾ ಸಿಬ್ಬಂದಿಗೆ ವಿವಿಧ ಸ್ಥಳಗಳಲ್ಲಿ ಆಯೋಜಿಸಲಾಗಿದೆ.
ಅರಣ್ಯ ಇಲಾಖೆ ಅಭಿವೃದ್ಧಿಗೆ ಅಗತ್ಯವಿರುವ ಅನುದಾನ, ಪರಿಕರ ಸೇರಿದಂತೆ ಯಾವುದೇ ಬೇಡಿಕೆಗಳಿದ್ದಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಚಿವ ಸಿ.ಸಿ.ಪಾಟೀಲ ಸೂಚಿಸಿದರು. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳೂ ಆಗಿರುವ ಅರಣ್ಯಪಡೆ ಮುಖ್ಯಸ್ಥ ಪುನಾಟಿ ಶ್ರೀಧರ, ಶಾಸಕ ಅಮೃತ ದೇಸಾಯಿ ಹಾಗೂ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ನಂತರ ಸಚಿವ ಸಿ.ಸಿ. ಪಾಟೀಲ್ ಅವರು ಅರಣ್ಯ ಕ್ರೀಡಾಕೂಟ-2019 ದ ಕ್ರೀಡಾ ಲಾಂಛನ ಅನಾವರಣಗೊಳಿಸಿದರು. ಬಳಿಕ ಪಥಸಂಚಲನದಲ್ಲಿ ಭಾಗವಹಿಸಿ, ಉತ್ತಮ ಪ್ರದರ್ಶನ ನೀಡಿದ ಧಾರವಾಡ ಗುಂಗರಗಟ್ಟಿ ಅರಣ್ಯ ಅಕಾಡೆಮಿಯ ತಂಡಕ್ಕೆ ಪ್ರಥಮ ಹಾಗೂ ಕೆನರಾ ವೃತ್ತದ ತಂಡಕ್ಕೆ ದ್ವಿತೀಯ ಬಹುಮಾನ ನೀಡಿ ಗೌರವಿಸಿದರು.