ಹುಬ್ಬಳ್ಳಿ: ಅತಿವೃಷ್ಟಿಯ ನಂತರ ಸಾಂಕ್ರಾಮಿಕ ರೋಗಗಳ ಹಾವಳಿ ಶುರುವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಅದರಲ್ಲೂ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಳೆದ 15 ದಿನಗಳಲ್ಲಿ ಶಂಕಿತ ಡೆಂಘೀ ಜ್ವರಕ್ಕೆ ಐವರು ಮಕ್ಕಳು ಬಲಿಯಾಗಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ.
ಆಸಾರಹೊಂಡದ ಮಾಹಿರಾ ಅಬ್ದುಲ್‌ಖಾದರ್ ಜುಂಗುರ(4), ಮೆಹಬಿನ್‌ತಾಜ್ ಮಹ್ಮದಗೌಸ್ ಜುಂಗುರ (10), ಆನಂದನಗರದ ಅಮೂಲ್ಯ ಹನುಮಂತ ಸವಣೂರ(9), ವಿದ್ಯಾನಗರ ಶೌರ್ಯ ಪವಾರ್ (5) ಹಾಗೂ ಸೆಟಲ್‌ಮೆಂಟ್‌ನ ಒಂದು ಮಗು ಶಂಕಿತ ಡೆಂಗ್ಯೂಗೆ ಬಲಿಯಾಗಿದ್ದು ಆತಂಕ ಸೃಷ್ಟಿಯಾಗಿದೆ.
ಜಿಲ್ಲಾಡಳಿತ ಮತ್ತು ಪಾಲಿಕೆ ನಿರ್ಲಕ್ಷದಿಂದಾಗಿ ಮಹಾಮಾರಿ ಹರಡಲು ಕಾರಣವಾಗಿದ್ದು, ಡೆಂಘೀ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಆಡಳಿತ ವ್ಯವಸ್ಥೆ ವಿಫಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇನ್ನು ನಗರದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಶಂಕಿತ ಡೆಂಘೀ ಸೇರಿದಂತೆ ಹಲವು ಕಾಯಿಲೆಗಳಿಗೆ ನೂರಾರು ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.