ಹುಬ್ಬಳ್ಳಿ: ಅನರ್ಹರ ಬಗ್ಗೆ ಹಗುರವಾಗಿ ಮಾತನಾಡಬಾರದೆಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದು ನಿಜ. ಆದರೆ ಅವರ ಆಡಿಯೋವನ್ನು ತಿರುಚಿ ಬಿಡುಗಡೆ ಮಾಡಲಾಗಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಎರಡು ಬಾರಿ ಸಿಡಿ ಮಾಡಿಸಿದ್ದರು. ಅದರಲ್ಲಿ ಒಂದು ಬಾರಿ ಬಿ.ಎಸ್.ಯಡಿಯೂರಪ್ಪ ಜೊತೆ ಲಿಂಗಾಯತರಿಲ್ಲ ಅನ್ನೋ ಆಡಿಯೋ. ಇನ್ನೊಂದು ಧರ್ಮಸ್ಥಳದಲ್ಲಿ ಲೋಕಸಭಾ ಚುನಾವಣೆ ನಂತರ ಮೈತ್ರಿ ಸರ್ಕಾರ ಬೀಳಲಿದೆ ಎಂಬ ಸಿಡಿ ಮಾಡಿಸಿದ್ದರು. ಸಿದ್ದರಾಮಯ್ಯ ಸಿಡಿ ಮಾಡಿಸುವುದರಲ್ಲಿ ಎಕ್ಸ್ಪರ್ಟ್. ಸಿದ್ದರಾಮಯ್ಯ ಸುಳ್ಳು ಹೇಳುವುದನ್ನು ಬಿಡಲಿ ಎಂದು ತಿರುಗೇಟು ನೀಡಿದರು.
ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಎಲ್ಲರಿಗೂ ಮೊಬೈಲ್ ತರುವ ಅವಕಾಶ ಇತ್ತು. ಈ ಬಗ್ಗೆ ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತನಿಖೆ ನಡೆಸಲಿದ್ದಾರೆ. ತನಿಖೆ ನಂತರವಷ್ಟೇ ಯಾರು ಆಡಿಯೋ ಮಾಡಿದ್ದು, ಯಾಕೆ ಆಡಿಯೋ ಮಾಡಿದ್ದರು ಎಂಬುದು ಬಹಿರಂಗವಾಗಲಿದೆ. ಆದರೆ ಆಡಿಯೋಗೂ ಹೈಕಮಾಂಡ್ಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದರು.
ಹೈಕಮಾಂಡ್ ಸೂಚಿಸಿದ ಹಾಗೇ ಕೇಳುವ ವ್ಯಕ್ತಿ ನಾನು. ಅವರು ವಿಧಾನಸಭೆಗೆ ಸೂಚಿಸಿದರೆ ವಿಧಾನಸಭೆ, ವಿಧಾನ ಪರಿಷತ್ಗೆ ಸೂಚಿಸಿದರೆ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧೆ ಮಾಡುವೆ ಎಂದು ಚುನಾವಣೆ ಸ್ಪರ್ಧೆ ಬಗ್ಗೆ ಸ್ಪಷ್ಟಪಡಿಸಿದರು.