ಧಾರವಾಡ: ಕೊರೊನಾ ಕಾರಣದಿಂದ ವಿಳಂಬವಾಗಿರುವ ವಿಶೇಷ ಘಟಕ ಯೋಜನೆ (ಎಸ್‍ಸಿಪಿ) ಹಾಗೂ ಗಿರಿಜನ ಉಪಯೋಜನೆ (ಟಿಎಸ್‍ಪಿ)ಯ ಎಲ್ಲಾ ಕಾರ್ಯಕ್ರಮಗಳು ಹಾಗೂ ಕಾಮಗಾರಿಗಳನ್ನು ನವೆಂಬರ್ ಒಳಗಾಗಿ ಪ್ರಾರಂಭಿಸಿ 2021ರ ಫೆಬ್ರವರಿಯೊಳಗೆ ಪೂರ್ಣಗೊಳಿಸಿ ಶೇ.100ರಷ್ಟು ಪ್ರಗತಿ ಸಾಧಿಸಬೇಕೆಂದು ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ 2020-21ನೇ ಸಾಲಿನ ಆಗಸ್ಟ್ ಅಂತ್ಯದವರೆಗಿನ ಜಿಲ್ಲೆಯ ವಿವಿಧ ಇಲಾಖೆಗಳ ಎಸ್‍ಸಿಪಿ ಹಾಗೂ ಟಿಎಸ್‍ಪಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಸರ್ವಾಂಗೀಣ ವಿಕಾಸಕ್ಕಾಗಿ ಜಿಲ್ಲೆಯ ವಿವಿಧ ಇಲಾಖೆಗಳಿಗೆ ವಿಶೇಷ ಘಟಕ ಯೋಜನೆಯಡಿ (ಎಸ್‍ಸಿಪಿ) 105.74 ಕೋಟಿ ರೂ.ಗಳ ಆರ್ಥಿಕ ಗುರಿ ನಿಗದಿಪಡಿಸಲಾಗಿದೆ. ಆಗಸ್ಟ್ ಅಂತ್ಯದವರೆಗೆ 44.31 ಕೋಟಿ ರೂ. ಬಿಡುಗಡೆಯಾಗಿದೆ. 12.28 ಕೋಟಿ ರೂ. ಖರ್ಚು ಮಾಡಲಾಗಿದೆ. 40,047 ಫಲಾನುಭವಿಗಳಿಗೆ ವಿವಿಧ ಸೌಲಭ್ಯ ಕಲ್ಪಿಸಿ ಶೇ.27.73ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪರಿಶಿಷ್ಟ ಪಂಗಡಗಳ ಜನರ ಕಲ್ಯಾಣಕ್ಕಾಗಿ ಗಿರಿಜನ ಉಪಯೋಜನೆ (ಟಿಎಸ್‍ಪಿ)ಯಡಿ ಪ್ರಸಕ್ತ ಸಾಲಿನಲ್ಲಿ 47.35 ಕೋಟಿ ರೂ. ಆರ್ಥಿಕ ಗುರಿ ಹಾಗೂ 46,358 ಫಲಾನುಭವಿಗಳ ಭೌತಿಕ ಗುರಿ ನಿಗದಿಪಡಿಸಲಾಗಿದೆ. ಆಗಸ್ಟ್ ಅಂತ್ಯದವರೆಗೆ 16.32 ಕೋಟಿ ರೂ. ಬಿಡುಗಡೆಯಾಗಿದ್ದು, 5.95 ಕೋಟಿ ರೂ.ಗಳನ್ನು ಈವರೆಗೆ ಖರ್ಚು ಮಾಡಲಾಗಿದೆ. 23,876 ಜನರಿಗೆ ಸೌಕರ್ಯಗಳನ್ನು ಒದಗಿಸಿ ಶೇ.36.47ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.
ಕೊರೊನಾ ಸೋಂಕಿನ ಕಾರಣದಿಂದ ವಿವಿಧ ಅಭಿವೃದ್ಧಿ ಚಟುವಟಿಕೆಗಳ ಅನುಷ್ಠಾನ ವಿಳಂಬವಾಗಿದೆ. ಆದರೆ ಬರುವ ನವೆಂಬರ್ ಒಳಗಾಗಿ ಎಲ್ಲಾ ಇಲಾಖೆಗಳು ತಮಗೆ ನಿಗದಿಪಡಿಸಿ ಎಸ್‍ಸಿಪಿ ಹಾಗೂ ಟಿಎಸ್‍ಪಿ ಕಾಮಗಾರಿಗಳನ್ನು ಪ್ರಾರಂಭಿಸಬೇಕು. 2021 ಫೆಬ್ರವರಿ ಒಳಗಾಗಿ ಪೂರ್ಣಗೊಳಿಸಬೇಕು ಎಂದಿದ್ದಾರೆ.
ಅಲ್ಲದೆ ಎಸ್‍ಸಿಪಿ, ಟಿಎಸ್‍ಪಿ ಯೋಜನೆಗಳಡಿ ಕೆಲವು ಕಾಮಗಾರಿಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರು ವಾಸವಿಲ್ಲದ ಕಡೆಗಳಲ್ಲಿ ಕೈಗೊಳ್ಳುತ್ತಿರುವುದಾಗಿ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಅವುಗಳ ಕುರಿತು ಸಮಾಜ ಕಲ್ಯಾಣ ಜಂಟಿ ನಿರ್ದೇಶಕರು ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಖುದ್ದು ಭೇಟಿ ನೀಡಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.