ಧಾರವಾಡ : ಕನ್ನಡದ ಖ್ಯಾತ ವಿಮರ್ಶಕ ಡಾ.ರಾಜೇಂದ್ರ ಚೆನ್ನಿ ಹಾಗೂ ಕವಿ ಡಾ.ಜಿನದತ್ತ ದೇಸಾಯಿಗೆ ದ.ರಾ. ಬೇಂದ್ರೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಧಾನ ಪರಿಷತ್ ಸದಸ್ಯ ಮಾಜಿ ಸಚಿವ ಎಚ್.ವಿಶ್ವನಾಥ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. 2023ನೇ ಸಾಲಿನ ಅಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಧಾರವಾಡದ ದ.ರಾ ಬೇಂದ್ರೆ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವರಕವಿ ಡಾ.ದ.ರಾ. ಬೇಂದ್ರೆ 127ನೇ ಜನ್ಮದಿನದ ಅಂಗವಾಗಿ ಈ ಪ್ರಶಸ್ತಿ ಕೊಡಲಾಗುತ್ತದೆ. ಡಾ. ದ. ರಾ. ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ ಸ್ಮಾರಕ ಆಶ್ರಮ ಕೂಡಿ ಮಾಡುವ ಪ್ರಶಸ್ತಿ ಇದಾಗಿದೆ.
ಪ್ರಶಸ್ತಿ ಪ್ರಧಾನ ಬಳಿಕ ಮಾತನಾಡಿದ ಹೆಚ್.ವಿಶ್ವನಾಥ್ ಅವರು, ವೀರಪ್ಪ ಮೊಯ್ಲಿ ಅವರ ಸರ್ಕಾರ ಬೇಂದ್ರೆ ಅವರಿಗೆ ದೊಡ್ಡ ಕೊಡುಗೆ ಕೊಟ್ಟಿದೆ. ಟ್ರಸ್ಟ್ ಮಾಡಲು ಸಹಕಾರ ಕೊಟ್ಟು, ಕಟ್ಟಡ ಕಟ್ಟಲು ಅನುದಾನ ಕೊಟ್ಟರು ಎಂದರು. ಧಾರವಾಡದ ಬೆಣ್ಣೆಗೆ ಧಾರಣೆ ಆಗಲಿಲ್ಲ ಅಂತಾ ಬೇಂದ್ರೆ ಹೇಳಿದ್ದರು. ಹಾಗೂ ಸ್ಥಳೀಯರು ನಮ್ಮನ್ನ ಹೇಗೆ ಒಪ್ಪಿಕೊಳ್ತಾರೆ ಎನ್ನುವುದು ಮುಖ್ಯ. ನನ್ನೂರಿನ ಜನ ನಮ್ಮನ್ನ ಒಪ್ಪಿಕೊಳ್ಳಬೇಕು ಎಂದು ಪಂಪರು ಹೇಳಿದ್ದರು. ಸರ್ಕಾರಕ್ಕೆ ಏನಾದರೂ ಕಣ್ಣು ಮೂಗು ಇದ್ದರೆ ರಾಷ್ಟ್ರೀಯ ಕವಿ ದಿನಾಚರಣೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಸಿಎಂ ಬೊಮ್ಮಾಯಿ ಜೊತೆ ಮಾತನಾಡಿ ಇಲ್ಲಿ ಕೊಟ್ಟ ಮನವಿಯನ್ನು ಸಲ್ಲಿಸುತ್ತೇನೆ. ಬೇಂದ್ರೆ ಅವರ ಸಾಹಿತ್ಯ ಸಂಸ್ಕೃತಿ ನೋಡುವಂತೆ ಇದೆ ಎಂದು ಹಳ್ಳಿಹಕ್ಕಿ ಹೆಚ್ ವಿಶ್ವನಾಥ್ ಅವರು ಮೂಡಲ ಮನೆಯ ಮುದ್ದಿನ ನೀರಿನ ಹಾಡು ಹಾಡಿದರು. ಬಳಿಕ ಕನ್ನಡದ ಎರಡು ಕಣ್ಣು ಕುವೆಂಪು ಹಾಗೂ ಅಂಬಿಕಾತನಯದತ್ತರು ಎಂದು ಇಬ್ಬರು ಕವಿಗಳನ್ನು ಬಣ್ಣಿಸಿದರು. ಬೇಂದ್ರೆ ಹೆಸರನ್ನು ನಾಡು ಪ್ರಯೋಜನ ಪಡೆಯಬೇಕು. ನಾನು ಮತ್ತೊಮ್ಮೆ ಬಂದಾಗ ಈ ಬಗ್ಗೆ ಮಾತನಾಡುತ್ತೇನೆ. ಸರ್ಕಾರದಿಂದ ನನಗೆ ಪ್ರತಿ ವರ್ಷ ಎರಡು ಕೋಟಿ ದುಡ್ಡು ಬರುತ್ತೆ. ಅದನ್ನು ನಾನು ಆರೋಗ್ಯ ಶಿಕ್ಷಣಕ್ಕೆ ಕೊಡುತ್ತೇನೆ ಎಂದು ಹೇಳಿದರು.
ಇದೆ ವೇಳೆ ಚೆನ್ನಿ ಹಾಗೂ ಜಿನದತ್ ಅವರಿಗೆ ಪ್ರಶಸ್ತಿ ಕೊಡುವ ಭಾಗ್ಯ ನನಗೆ ಸಿಕ್ಕಿದ್ದು ಸಂತೋಷವಾಗಿದೆ. ಕನ್ನಡದ ಕೆಲಸವನ್ನು ಎಲ್ಲರೂ ಸೇರಿ ಮಾಡೋಣ, ಇದು ಸಾಹಿತಿಗಳು ಒಪ್ಪಿರುವ ಭಾಗ. ಬಂಡಾಯ ಸಾಹಿತ್ಯ, ದಲಿತ ಸಾಹಿತ್ಯ, ಮಹಿಖಾ ಸಾಹಿತ್ಯ ಇವೆ. ರಾಜಕೀಯ ಸಾಹಿತ್ಯ ಬೇಕು. ನಾವು ಜನತಂತ್ರ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ ಎಂದು ಹೆಚ್ ವಿಶ್ವನಾಥ್ ಹೇಳಿದರು.
ರಾಜಕಾರಣಿಗಳನ್ನು ಅನುಮಾನದಿಂದ ನೋಡುವಂತೆ ಪರಿಸ್ಥಿತಿ ಸಮಾಜದಲ್ಲಿ ಆಗಿದೆ. ನಕಾರಾತ್ಮಕವಾಗಿ ನೋಡಿದಾಗ ಪ್ರಜಾತಂತ್ರಕ್ಕೆ ಧಕ್ಕೆ ಆಗುತ್ತೆ. ಈ ದೇಶದ ಬಗ್ಗೆ ನಾನು ಪುಸ್ತಕ ಬರೆದಿದ್ದೇನೆ ಎಂದು ತಮ್ಮ ರಾಜಕೀಯ ಜೀವನದ ಅನುಭವಗಳನ್ನು ಹೇಳಿದರು. ಗ್ರೀಸ್ ನಲ್ಲಿ 2500 ವರ್ಷಗಳ ಹಿಂದೆ ಚುನಾವಣೆ ಬಂದಿತ್ತು. ಆಗ ಕಲ್ಲುಗಳೇ ಬ್ಯಾಲೆಟ್ ಇದ್ದವು, ಮಣ್ಣಿನ ಮಡಿಕೆಯಲ್ಲಿ ಅದನ್ನು ಹಾಕುತ್ತಿದ್ದರು. ನನ್ನ ಮತ ದೇಶದ ಅಭಿವೃದ್ಧಿ ಕಾಪಾಡಲಿ ಎಂದು ಹಾಕುತ್ತಿತಿದ್ದರು ಎಂದು ಅಂದಿನ ಚುನಾವಣೆಗಳ ಬಗ್ಗೆ ವಿಧಾನ ಪರಿಷತ್ ಸದಸ್ಯರು ತಿಳಿಸಿದರು.
ವೇದಿಕೆ ಮೇಲೆ ಮಾತನಾಡುವಾಗಲೇ ರಮೇಶ್ ಜಾರಕಿಹೊಳಿ ವಿರುದ್ಧ ಕಿಡಿಕಾರಿದರು. ಇವತ್ತು ಮತಕ್ಕೆ ಎಷ್ಟು ರೂಪಾಯಿ ಅಂತಾರೆ. ಅವನು ಯಾವನೋ 6 ಸಾವಿರ ಎಂದಿದ್ದಾನೆ ಎಂದು ಏಕವಚನದಲ್ಲೇ ರಮೇಶ್ ಜಾರಕಿಹೊಳಿಗೆ ತಿವಿದರು. ಮೊದಲು ಮುತ್ತೈದೆಯರು ಬಂದು ಮತ ಹಾಕುತ್ತಿದ್ದರು, ಅದನ್ನು ಕಳೆದುಕೊಂಡಿದ್ದೇನೆ. ನಾವು 5 ಸಾವಿರ ಕೊಟ್ಟರೆ ಮತ ಹಾಕುತ್ತೇವೆ, ಅಂತ ಕೆಟ್ಟ ಸ್ಥಿತಿಗೆ ಬಂದಿದ್ದೇವೆ ಎಂದು ರಾಜ್ಯ ರಾಜಕೀಯದ ಮೇಲೆ ಬೇಸರ ಹೊರಹಾಕಿದರು.
ರಾಜಕಾರಣಿ ಹಾಗೂ ಮತದಾರ ಇಬ್ಬರೂ ಭ್ರಷ್ಟರು : ಜನರನ್ನು ಭ್ರಷ್ಟರನ್ನಾಗಿ ನಾವು ಮಾಡಿದ್ದೇವೆ. ಚುನಾವಣೆಗೆ ಬೆಲೆ ಇಲ್ಲಾ, ಚುನಾವಣೆ ಬರುತ್ತಿದೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಟಿಕೆಟ್ಗಾಗಿ 20 ಕೋಟಿ ಕೊಡ್ತೇನೆ ಅಂತಾನೆ ರಿಯಲ್ ಎಸ್ಟೇಟ್ನವರು ರಾಜಕೀಯಕ್ಕೆ ಬಂದು ಬಿಟ್ಟಿದ್ದಾರೆ. ಇವತ್ತಿನ ವ್ಯವಸ್ಥೆ ನೋಡಿದರೆ ಎಲ್ಲಿ ನಿಂತಿದ್ದೇವೆ ಅನ್ನೋದು ತಿಳಿಯುತ್ತಿದೆ. ರಾಜಕಾರಣವನ್ನು ಮೈಲಿಗೆಯಿಂದ ನೋಡುವುದು ಅಪಾಯಕಾರಿ. ರಾಜಕಾರಣಿ ಹಾಗೂ ಮತದಾರ ಇಬ್ಬರೂ ಭ್ರಷ್ಟರು ಆಗಿದ್ದಾರೆ. ನಾನು ಈ ವ್ಯವಸ್ಥೆಯಲ್ಲಿ ಚುನಾವಣೆಗೆ ನಿಲ್ಲಲ್ಲ ಎಂದು ಹೆಚ್ ವಿಶ್ವನಾಥ್ ಸ್ಪಷ್ಟಪಡಿಸಿದರು.
ಇದನ್ನೂ ಓದಿ :ಸಾಹಿತಿ ಬರಗೂರು ರಾಮಚಂದ್ರಪ್ಪಗೆ ಅನಾರೋಗ್ಯ.. ವಿಶ್ರಾಂತಿ ಪಡೆಯುವಂತೆ ವೈದ್ಯರ ಸಲಹೆ