ಹುಬ್ಬಳ್ಳಿ: ಕೊರೊನಾ ಸಂಕಷ್ಟ ಸಂದರ್ಭದಲ್ಲಿ ಅನ್ಯ ರೋಗಿಗಳು ಪರದಾಟ ನಡೆಸುತ್ತಿದ್ದಾರೆ ಎಂಬ ಆರೋಪ ಕಿಮ್ಸ್ ಆಸ್ಪತ್ರೆಯಲ್ಲಿ ಕೇಳಿ ಬಂದಿದೆ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಿಟಿ ಸ್ಕ್ಯಾನ್ ಮಾಡಲು ಖಾಸಗಿ ಆಸ್ಪತ್ರೆಗೆ ಬರೆದು ಕೊಡುತ್ತಿದ್ದಾರೆ. ಅಲ್ಲದೇ ಕಿಮ್ಸ್ ಆಸ್ಪತ್ರೆಯ ಆ್ಯಂಬುಲೆನ್ಸ್ನಲ್ಲಿ ಕರೆದುಕೊಂಡು ಹೋದರು ಕೂಡ 400 ರೂ. ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಕಿಮ್ಸ್ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನಿಂಗ್ ಸೇರಿದಂತೆ ಬಹುತೇಕ ವ್ಯವಸ್ಥೆ ಇದ್ದರೂ ಕೂಡ ಬೇರೆ ಕಡೆಗೆ ಸ್ಕ್ಯಾನಿಂಗ್ಗೆ ಕಳುಹಿಸುತ್ತಿರುವುದು ಆಸ್ಪತ್ರೆಗೆ ಬರುವ ರೋಗಿಗಳಿಗೆ ಆರ್ಥಿಕ ಹೊರೆಯಾಗುತ್ತಿದೆ. ಬಿಪಿಎಲ್ ಸೇರಿದಂತೆ ಬಡತನ ರೇಖೆಗಿಂತ ಕೆಳಗಿರುವ ಜನರು ಉಚಿತ ಆರೋಗ್ಯ ಸೇವೆ ಪಡೆಯಲು ಸರ್ಕಾರದ ಕಿಮ್ಸ್ ಆಸ್ಪತ್ರೆಗೆ ಬಂದರೆ ಇಲ್ಲಿ ಸಿಟಿ ಸ್ಕ್ಯಾನಿಂಗ್ ಮಾಡಿಸಲು ಖಾಸಗಿ ಆಸ್ಪತ್ರೆಗೆ ಹೋಗುವಂತೆ ಅನಿವಾರ್ಯತೆ ಎದುರಾಗಿದೆ. ಇದರಿಂದ ಬಡರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಅವರು ಪ್ರತಿಕ್ರಿಯೆ ನೀಡಿದ್ದು, ಕಿಮ್ಸ್ ಸಿಟಿ ಸ್ಕ್ಯಾನ್ ಯಂತ್ರ ದುರಸ್ತಿ ಇರುವುದರಿಂದ ಖಾಸಗಿ ಸ್ಕ್ಯಾನಿಂಗ್ ಸೆಂಟರ್ಗಳಿಗೆ ಕಳುಹಿಸಿಕೊಡಲಾಗುತ್ತಿದೆ. ಕೊರೊನಾ ಕಾರಣದಿಂದ ಯಾರನ್ನು ಹೊರಗಡೆ ಬೇರೆ ಲ್ಯಾಬ್ಗಳಿಗೂ ಕಳುಹಿಸಿಲ್ಲ. ಕಿಮ್ಸ್ ಸ್ಕ್ಯಾನಿಂಗ್ ಮಷಿನ್ ಆದಷ್ಟು ಬೇಗ ರಿಪೇರಿ ಮಾಡಲಾಗುತ್ತದೆ ಎಂದಿದ್ದಾರೆ.
ಇನ್ನು ಆ್ಯಂಬುಲೆನ್ಸ್ ನಿರ್ವಹಣೆಗೆ ಅಲ್ಪ ಮೊತ್ತದ ಶುಲ್ಕ ವಿಧಿಸುತ್ತೇವೆ. ರೋಗಿ ಬಿಪಿಎಲ್ ಕಾರ್ಡ್ದಾರರಾಗಿದ್ದರೆ ಮಾನವೀಯತೆ ದೃಷ್ಟಿಯಿಂದ ಯಾವುದೇ ಶುಲ್ಕ ವಿಧಿಸುವುದಿಲ್ಲ. ಅಂತಹ ಪ್ರಕರಣಗಳಿದ್ದರೇ ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ.