ಹುಬ್ಬಳ್ಳಿ : ಯುವಕನನ್ನು ವಿವಸ್ತ್ರಗೊಳಿಸಿ ಮನಬಂದಂತೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಹುಬ್ಬಳ್ಳಿ-ಧಾರವಾಡ ಪೊಲೀಸರು ಈಗಾಗಲೇ ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಇದೀಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾಜಿ ಸದಸ್ಯರ ಇಬ್ಬರು ಪುತ್ರರನ್ನೂ ಬಂಧಿಸಲಾಗಿದೆ.
ಮೊದಲು ಘಟನೆಯ ಎರಡು ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಐವರು ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ ಇಪ್ಪತ್ತಕ್ಕೂ ಹೆಚ್ಚು ಮಂದಿ ಯುವಕನಿಗೆ ಥಳಿಸುತ್ತಿರುವ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶ್ಯಾಮ್ ಜಾಧವ್ ಅವರ ಇಬ್ಬರು ಪುತ್ರರನ್ನು ವಶಕ್ಕೆ ಪಡೆಯಲಾಗಿದೆ. ಈ ಹಿಂದೆ ಮಾಜಿ ಕಾರ್ಪೊರೇಟರ್ ಶ್ಯಾಮ್ ಜಾಧವ್ ಪುತ್ರ ಗಣೇಶ್ ಎಂಬಾತನನ್ನು ಪೊಲೀಸರು ಸೆರೆ ಹಿಡಿದಿದ್ದರು. ಶನಿವಾರ ಇನ್ನೊಬ್ಬ ಪುತ್ರ ಅಭಿಷೇಕ ಎಂಬಾತನನ್ನು ಅರೆಸ್ಟ್ ಮಾಡಲಾಗಿದೆ. ಇವರ ಜೊತೆಗೆ ರಾಹುಲ್ ಎಂಬಾತನನ್ನೂ ವಶಕ್ಕೆ ಪಡೆಯಲಾಗಿದೆ.
ಸಂದೀಪ್ ಸಾಳುಂಕೆ ಎಂಬ ಯುವಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಇದುವರೆಗೆ 7 ಮಂದಿಯನ್ನು ಬಂಧಿಸಲಾಗಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಬುದ್ನಿ ಅವರನ್ನು ಬೇರೆಡೆ ನಿಯೋಜಿಸಿ ಜಯಪಾಲ ಪಾಟೀಲರನ್ನು ಪ್ರಭಾರಿಯಾಗಿ ನೇಮಿಸಲಾಗಿತ್ತು.
ಇದನ್ನೂ ಓದಿ : ಯುವಕನನ್ನು ನಗ್ನಗೊಳಿಸಿ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ಐವರ ಬಂಧನ: ಪೊಲೀಸ್ ಕಮಿಷನರ್ ಸಂತೋಷ ಬಾಬು
ಘಟನೆಯ ಹಿನ್ನೆಲೆ : ಕಳೆದ ಐದು ತಿಂಗಳ ಹಿಂದೆ ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದ ಅಮಾನವೀಯ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿತ್ತು. ಈ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ್ದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಸಂತೋಷ್ ಬಾಬು, ಯುವಕನನ್ನು ಬೆತ್ತಲೆ ಮಾಡಿ ಥಳಿಸಿರುವ ಎರಡು ವಿಡಿಯೋಗಳು ನಮ್ಮ ಗಮನಕ್ಕೆ ಬಂದಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್, ವಿನಾಯಕ್, ಗಣೇಶ್, ಸಚಿನ್, ಮಂಜುನಾಥ್ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದು ಹೇಳಿದ್ದರು.
ಇನ್ಸ್ಟಾಗ್ರಾಮ್ನಲ್ಲಿ ಸಂತ್ರಸ್ತ ಸಂದೀಪ್, ಪ್ರಜ್ವಲ್ ಎಂಬಾತನ ತಾಯಿಗೆ ಕೆಟ್ಟದಾಗಿ ಬೈದಿದ್ದ. ಈ ಸಂಬಂಧ ಆರೋಪಿತರು ಸಂದೀಪ್ಗೆ ವಿವಸ್ತ್ರಗೊಳಿಸಿ ಥಳಿಸಿದ್ದರು. ಈ ಬಗ್ಗೆ ಸಂದೀಪ್ ದೂರು ಇದುವರೆಗೂ ಕೊಟ್ಟಿಲ್ಲ. ಆತನು ಯಾರ ಸಂಪರ್ಕದಲ್ಲೂ ಇಲ್ಲ. ಮೂರು ನಾಲ್ಕು ತಿಂಗಳ ಹಿಂದೆ ಹುಬ್ಬಳ್ಳಿಯ ಸೆಟ್ಲಮೆಂಟ್ನಲ್ಲಿ ಘಟನೆ ನಡೆದಿತ್ತು. ಆದರೆ, ಸ್ಥಳ ಯಾವುದು ಎಂದು ಖಚಿತವಾಗಿರಲಿಲ್ಲ ಎಂದು ತಿಳಿಸಿದ್ದರು.
ಇದನ್ನೂ ಓದಿ : ಯುವಕನ ವಿವಸ್ತ್ರಗೊಳಿಸಿ ಹಲ್ಲೆ ಕೇಸ್: ಬೆಂಡಿಗೇರಿ ಇನ್ಸ್‌ಪೆಕ್ಟರ್, ಹುಬ್ಬಳ್ಳಿ ಮಹಿಳಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ವರ್ಗಾವಣೆ