ಹುಬ್ಬಳ್ಳಿ : ಸೌಂದರ್ಯ ವರ್ಧನೆಗೆ ಹೆಚ್ಚಿನವ್ರು ಬ್ಯೂಟಿ ಪಾರ್ಲರ್ ಮೊರೆ ಹೋಗುತ್ತಾರೆ. ಅದ್ರಲ್ಲೂ ಮದುವೆ ಸೇರಿ ಇನ್ನಿತರೆ ಸಮಾರಂಭಗಳಿಗೆ ಬ್ಯೂಟಿ ಪಾರ್ಲರ್ ಅನ್ನೇ ಹೆಚ್ಚಾಗಿ ಜನರು ಅವಲಂಬಿಸಿಸುತ್ತಾರೆ. ಆದ್ರೆ, ಕೋವಿಡ್ ಹಿನ್ನೆಲೆ ಸಮಾರಂಭಗಳು ಸರಳವಾಗಿ ನಡೆಯುತ್ತಿವೆ. ಬ್ಯೂಟಿ ಪಾರ್ಲರ್ ಕ್ಷೇತ್ರದ ಮೇಲೆ ಭಾರೀ ಹೊಡೆತ ಬಿದ್ದಿದೆ.
ಕೋವಿಡ್ನಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ದೇಶ ಹಾಗೂ ರಾಜ್ಯದ ಹೆಚ್ಚಿನ ಕ್ಷೇತ್ರಗಳಿಗೆ ಇಂತಿಷ್ಟು ಹಣ ನೀಡುತ್ತಿದೆ. ಅದರಂತೆ ಬ್ಯೂಟಿಷಿಯನ್ ಕ್ಷೇತ್ರಕ್ಕೂ ಸಹಾಯ ಮಾಡಬೇಕೆನ್ನುವ ಒತ್ತಾಯ ಕೇಳಿ ಬಂದಿದೆ. ಇನ್ನು, ಏಪ್ರಿಲ್ ಹಾಗೂ ಮೇ ತಿಂಗಳು ಮದುವೆ ಸೀಜನ್ ಆಗಿದ್ದು, ಉತ್ತಮ ಆದಾಯ ಗಳಿಸುವ ಸಮಯವದು.
ಆದ್ರೆ, ಈ ಬಾರಿ ಕೆಲಸವಿಲ್ಲದೇ ಬ್ಯೂಟಿ ಪಾರ್ಲರ್ ಮಾಲೀಕರು, ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಸರ್ಕಾರ ನಮ್ಮ ನೆರವಿಗೆ ಬರಬೇಕೆಂದು ಮನವಿ ಮಾಡಿದ್ದಾರೆ. ಗ್ರಾಹಕರು ಸಹ ಸಹಕರಿಸಿ ಯಾವುದೇ ಭಯ ಪಡದೇ ಪಾರ್ಲರ್ಗೆ ಬನ್ನಿ ಎಂದು ಬ್ಯೂಟಿ ಪಾರ್ಲರ್‌ನವರು ಮನವಿ ಮಾಡಿದ್ದಾರೆ.
ಇನ್ನು, ಕೊರೊನಾ ತಡೆಗಟ್ಟಲು ರಾಜ್ಯ ಸರ್ಕಾರ ಲಾಕ್ಡೌನ್ ಮಾಡಿದ್ದು, ಒಳ್ಳೆಯ ವಿಚಾರ. ಆದರೆ, ಏಪ್ರಿಲ್, ಮೇ ತಿಂಗಳಿನಲ್ಲಿ ಬ್ಯೂಟಿಷಿಯನ್ ಕ್ಷೇತ್ರ ಭಾರೀ ನಷ್ಟ ಅನುಭವಿಸಿದೆ. ಬ್ಯೂಟಿಷಿಯನ್ ಕ್ಷೇತ್ರದ ಮೇಲೆ ಹಲವಾರು ಉದ್ಯಮಗಳು ಅವಲಂಬಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಾಗಿ, ರಾಜ್ಯ ಸರ್ಕಾರ ಇದನ್ನೆಲ್ಲ ಪರಿಗಣಿಸಿ ತಕ್ಷಣವೇ ಬ್ಯೂಟಿ ಪಾರ್ಲರ್ ನಂಬಿ ಜೀವನ ಸಾಗಿಸುತ್ತಿರುವ ಎಲ್ಲ ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡುವುಂತೆ ಮನವಿ ಮಾಡಿದ್ದಾರೆ.