ಧಾರವಾಡ : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಮನೆ ಮೇಲೆ ಸಿಬಿಐ ದಾಳಿ ವಿಚಾರವನ್ನು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್ ಆರ್ ಹಿರೇಮಠ ಸ್ವಾಗತಿಸಿದ್ದಾರೆ. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರ ಹಣ ಲೂಟಿ ಮಾಡಿ ಅಕ್ರಮ ಹಣ ಸಂಪಾದನೆ ಮಾಡಿದವರಿಗೆ ಶಿಕ್ಷೆ ಆಗಬೇಕು.
ಅಕ್ರಮ ಹಣ ಗಳಿಕೆ ಮಾಡಿದವರ ಮನೆಗಳ ಮೇಲೆ ದಾಳಿ ಮಾಡುವ ಮೂಲಕ ಅಂತವರ ವಿರುದ್ಧ ಸಿಬಿಐ ಕಠಿಣ ಕ್ರಮಕೈಗೊಳ್ಳಬೇಕು. ಸಾವಿರಾರು ಕೋಟಿ ಹಣವನ್ನು ಡಿಕೆಶಿ ಗಳಿಕೆ ಮಾಡಿದ್ದಾರೆ. ಈ ಬಗ್ಗೆ ತನಿಖೆಯಾಗಲಿ. ಈ ಬಗ್ಗೆ ಕಾಂಗ್ರೆಸ್ ಪ್ರತಿಭಟನೆ ಮಾಡುವುದನ್ನು ಮೊದಲು ಕೈಬಿಡಲಿ ಎಂದಿದ್ದಾರೆ.
ರಾಜ್ಯದಲ್ಲಿ ಪ್ರತಿಭಟನೆ ಮಾಡುವ ಬದಲು ಡಿಕೆಶಿ ಮನೆ ಮೇಲಿನ ಸಿಬಿಐ ದಾಳಿಯನ್ನು ಸ್ವಾಗತಿಸಿ, ತಪ್ಪು ಯಾರೇ ಮಾಡಿದ್ದರೂ ಸಹ ಅವರಿಗೆ ಶಿಕ್ಷೆಯಾಗಬೇಕು. ಗಾಲಿ ಜನಾರ್ದನ ರೆಡ್ಡಿ ₹40,000 ಕೋಟಿ ಆಸ್ತಿ ಇದೆ ಎಂದು ಹೇಳಿಕೆ ನೀಡುತ್ತಾರೆ. ಆದರೆ, ಅದು ಬೆವರು ಸುರಿಸಿ ದುಡಿದ ಹಣವಲ್ಲ. ಶ್ರೀರಾಮಲು 100 ಕೋಟಿ ಹಣದಲ್ಲಿ ಮನೆ ನಿರ್ಮಾಣ ಮಾಡಿದ್ದಾರೆ.
ಅಷ್ಟು ದೊಡ್ಡ ಮನೆ ಕಟ್ಟಲು ರಾಮಲು ಅವರಿಗೆ ಹಣ ಎಲ್ಲಿಂದ ಬಂತು ಎಂಬುದು ತಿಳಿಯುತ್ತಿಲ್ಲ ಎಂದು ಇದೇ ವೇಳೆ ಆರೋಪಿಸಿದ್ದಾರೆ. ಭ್ರಷ್ಟರ ವಿರುದ್ಧ ಸಿಬಿಐ ತನಿಖೆ ನಡೆಸಿ ಅಕ್ರಮ ಹಣದ ವಹಿವಾಟುಗಳನ್ನೆಲ್ಲ ಬಯಲಿಗೆಳೆಯುವ ಮೂಲಕ ಕಠಿಣ ಕ್ರಮಕೈಗೊಳ್ಳಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.