ಧಾರವಾಡ: ಕೊರೊನಾ ಹಾವಳಿಯಿಂದ ಎಲ್ಲಾ ರೀತಿಯ ಉದ್ಯಮಗಳು ನೆಲಕಚ್ಚಿದ್ದವು. ಆದರೆ ಸರ್ಕಾರ ಆರ್ಥಿಕ ಚೇತರಿಕೆಗಾಗಿ ಹಂತ ಹಂತವಾಗಿ ಲಾಕ್ಡೌನ್ ಸಡಿಲಿಕೆ ಮಾಡಿ ವ್ಯಾಪಾರ ವಹಿವಾಟಿಗೆ ಅನುಕೂಲ ಮಾಡಿಕೊಟ್ಟಿದೆ. ಆದರೆ ಚಿತ್ರಮಂದಿರ ತೆಗೆಯಲು ಸರ್ಕಾರದ ಆದೇಶವಿದ್ದರೂ ಕೂಡ ಇನ್ನೂ ಚಿತ್ರಮಂದಿರಗಳು ಬಿಕೋ ಎನ್ನುತ್ತಿವೆ.
ಧಾರವಾಡದ ಬಹುತೇಕ ಚಿತ್ರಮಂದಿರಗಳು ಸದ್ಯ ಖಾಲಿ ಖಾಲಿಗಿ ಕಂಡುಬರುತ್ತಿವೆ. ಸರ್ಕಾರ ಚಿತ್ರಮಂದಿರ ತೆರೆಯಲು ಆದೇಶ ನೀಡಿದರೂ ಕೂಡ ಮಾಲೀಕರು ಮಾತ್ರ ಇನ್ನೂ ಒಪನ್ ಮಾಡಿಲ್ಲ. ಕರ್ನಾಟಕ ಫಿಲ್ಮ್ ಎಕ್ಸಿಬಿಷನ್ ಫೆಡರೇಶನ್ ಗದಗದಲ್ಲಿ ಸಭೆ ಸೇರಿ ತೀರ್ಮಾನ ಕೈಗೊಳ್ಳಲಾಗಿದೆ. ಸರ್ಕಾರದ ಮುಂದಿರುವ ಬೇಡಿಕೆಗಳನ್ನು ಈಡೇರಿಸುವರೆಗೂ ಚಿತ್ರಮಂದಿರ ಪ್ರಾರಂಭ ಮಾಡಬಾರದು ಎಂದು ನಿರ್ಧರಿಸಿದ್ದಾರೆ.
ಕೊರೊನಾ ಹೊಡೆತದಿಂದ ಲಾಕ್ಡೌನ್ ಮಾಡಿದ 7-8 ತಿಂಗಳಲ್ಲಿ ಚಿತ್ರಮಂದಿರದ ಮಾಲೀಕರು ಸುಮಾರು 40-50 ಲಕ್ಷ ನಷ್ಟ ಅನುಭವಿಸಿದ್ದಾರೆ. ಆದರೆ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಿದರೆ ಚಿತ್ರಮಂದಿರ ಪ್ರಾರಂಭಿಸುತ್ತೇವೆ ಎಂದು ಮಾಲೀಕರು ತಿಳಿಸಿದ್ದಾರೆ.