ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಇತಿಹಾಸ ಪ್ರಸಿದ್ಧ ಛಬ್ಬಿ ಗಣೇಶನ ಮೇಲೂ ಕೊರೊನಾ ಕರಿನೆರಳು ಬಿದ್ದಿದೆ. ಈ ಬಾರಿ ಸರಳವಾಗಿ ಆಚರಣೆ ಗಣೇಶೋತ್ಸವ ಆಚರಿಸುವಂತೆ ಗ್ರಾಮ ಪಂಚಾಯತ್ ತಿಳಿಸಿದೆ.
ಛಬ್ಬಿ ಗಣೇಶನಿಗೆ ಐತಿಹಾಸಿಕ ಹಿನ್ನೆಲೆ ಇದ್ದು, ಗಣೇಶ ಚತುರ್ಥಿಯಿಂದ ಮೂರು ದಿನಗಳ ಕಾಲ ಕುಲಕರ್ಣಿ ಮನೆತನದವರು ಗಣೇಶನನ್ನು ಪ್ರತಿಷ್ಠಾಪನೆ ಮಾಡುತ್ತಿದ್ದರು. ಈ ಗಣೇಶ ಮೂರ್ತಿ ದರ್ಶನಕ್ಕೆ ರಾಜ್ಯ ಅಷ್ಟೇ ಅಲ್ಲದೆ ಮಹಾರಾಷ್ಟ್ರ, ಗೋವಾ, ಆಂಧ್ರ ಪ್ರದೇಶ ಸೇರಿದಂತೆ ಅನ್ಯ ರಾಜ್ಯಗಳ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ವಿಘ್ನೇಶ್ವರನ ದರ್ಶನ ಪಡೆಯುತ್ತಿದ್ದರು.
ಆದರೆ ಈ ಬಾರಿ ಛಬ್ಬಿ ಗಣೇಶ ಉತ್ಸವವನ್ನು ಕುಲಕರ್ಣಿ ಕುಟುಂಬಕ್ಕೆ ಮಾತ್ರ ಸೀಮಿತಗೊಳಿಸಿ ಗ್ರಾಮ ಪಂಚಾಯತ್ ಠರಾವ್ ಪಾಸ್ ಮಾಡಿ, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಗೆ ನೀಡಿದೆ. ಕುಲಕರ್ಣಿ ಕುಟುಂಬ ಮನೆಯಲ್ಲಿಯೇ ಸರಳವಾಗಿ ಮೂರು ದಿನಗಳವರೆಗೆ ಗಣೇಶನನ್ನು ಪ್ರತಿಷ್ಠಾಪಿಸಿ ಗ್ರಾಮಸ್ಥರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ವಿಘ್ನೇಶ್ವರನ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು. ಅನ್ಯ ಗ್ರಾಮದ ಸಾರ್ವಜನಿಕರಿಗೆ ಗ್ರಾಮ ಪ್ರವೇಶಕ್ಕೆ ತಡೆಯನ್ನು ನೀಡುವಂತೆ ಪೊಲೀಸ್ ಇಲಾಖೆಗೆ ಗ್ರಾಮ ಪಂಚಾಯತ್ ಮನವಿ ಮಾಡಿದೆ.