ಹುಬ್ಬಳ್ಳಿ: ಕೊರೊನಾ ದೃಢಪಟ್ಟು ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಳೇ ಹುಬ್ಬಳ್ಳಿಯ ಮುಲ್ಲಾ ಓಣಿಯ ಮೂವರು ಮಕ್ಕಳ ಜೊತೆ ತಂಗಲು ಸೋಂಕಿತಳಲ್ಲದ ತಾಯಿಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿ ಮಾನವೀಯತೆ ಮೆರೆದಿದೆ.
ಕಳೆದ ಕೆಲವು ದಿನಗಳ ಹಿಂದೆಯಷ್ಟೇ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಒಂದೇ ಕುಟುಂಬದ ಐದು ಜನರಲ್ಲಿ ಕೊರೊನಾ ದೃಢಪಟ್ಟಿದ್ದು, ಅದರಲ್ಲಿ ಮೂವರು ಮಕ್ಕಳು ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ಇರುವುದು ಖಚಿತವಾಗಿರುವ ರೋಗಿ ಹಾಗೂ ಅವರ ಅಣ್ಣನಿಗೆ ಮೂವರು ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟವಾಗುತ್ತಿದೆ.
ಅದರಲ್ಲೂ ಮೂರೂವರೆ ಮತ್ತು ಐದು ವರ್ಷದ ಮಕ್ಕಳನ್ನು ಸಮಾಧಾನಪಡಿಸಲು ವೈದ್ಯರು ಹಾಗೂ ಸಿಬ್ಬಂದಿ ಸಾಕಷ್ಟು ಪ್ರಯತ್ನ ಮಾಡಿದರೂ ಸಾಧ್ಯವಾಗುತ್ತಿಲ್ಲ. ಇದರಿಂದ ತಾಯಿ, ಮಕ್ಕಳೊಂದಿಗೆ ಇರಲು ಅನುಮತಿ ಕೊಡುವಂತೆ ವೈದ್ಯರು ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದರು. ಜಿಲ್ಲಾಧಿಕಾರಿ ಜೊತೆ ಚರ್ಚಿಸಿದ ಬಳಿಕ ಕಿಮ್ಸ್ ವೈದ್ಯರು ಮಕ್ಕಳೊಂದಿಗೆ ಇರಲು ತಾಯಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ತಾಯಿಗೆ ವೈಯಕ್ತಿಕ ಸುರಕ್ಷತಾ ಸಾಧನ, ಕೈ ಗ್ಲೌಸ್ ಮತ್ತು ಮಾಸ್ಕ್ ನೀಡಲಾಗಿದೆ. ಸೋಂಕಿನ ಲಕ್ಷಣಗಳ ಬಗ್ಗೆ ಜಾಗೃತಿ ವಹಿಸಲು ನಿರಂತರವಾಗಿ ತಪಾಸಣೆ ಮಾಡಲಾಗುತ್ತಿದೆ.