ಧಾರವಾಡ: ಲಾಕ್ಡೌನ್ ಸಡಿಲವಾಗಿದ್ದಷ್ಟೇ ತಡ ಮಾಹಾಮಾರಿ ಕೊರೊನಾ ಹಳ್ಳಿಯಿಂದ ಹಿಡಿದು ಗಲ್ಲಿ ಗಲ್ಲಿಗಳಲ್ಲಿ ವಿಸ್ತರಿಸುತ್ತಲೇ ಹೋಗುತ್ತಿದೆ. ಈಗ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ 40ಕ್ಕೂ ಅಧಿಕ ಜನರಲ್ಲಿ ಕೊರೊನಾ ವಕ್ಕರಿಸಿ ಆತಂಕ ಮೂಡಿಸಿದೆ.
ಇದಷ್ಟೇ ಅಲ್ಲದೆ ಪಕ್ಕದ ಗ್ರಾಮ ಶಿರಕೋಳದವರೆಗೂ ಕೊರೊನಾ ಬಲವಾಗಿ ಹಬ್ಬುತ್ತಿದೆ. ಕಲಘಟಗಿ ಹಾಗೂ ಕುಂದಗೋಳ ತಾಲೂಕಿನ ಕೆಲವೊಂದಿಷ್ಟು ಹಳ್ಳಿಗಳಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಸೋಂಕು ಸಮುದಾಯಕ್ಕೂ ಹಬ್ಬಿದೆಯಾ ಎಂಬ ಪ್ರಶ್ನೆ ಕಾಡುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಮೊರಬ ಗ್ರಾಮದಲ್ಲಿ ಸಮುದಾಯಕ್ಕೂ ಕೊರೊನಾ ಹಬ್ಬಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಮೊರಬ ಗ್ರಾಮದಲ್ಲಿ ಸಮುದಾಯಕ್ಕೆ ಕೊರೊನಾ ಹಬ್ಬಿಲ್ಲ. ಒಂದೇ ಕುಟುಂಬದ ಸದಸ್ಯರಿಗೆ ಕೊರೊನಾ ಹಬ್ಬಿದೆ. ಅದೇ ಓಣಿಯ ಕೆಲ ಜನರಿಗೆ ಸೋಂಕು ತಗುಲಿದೆ. ಹಾಗೆಂದ ಮಾತ್ರಕ್ಕೆ ಅದನ್ನು ಕಮ್ಯುನಿಟಿ ಸ್ಪ್ರೆಡ್ ಅನ್ನೋದಕ್ಕೆ ಬರೋದಿಲ್ಲ ಎಂದಿದ್ದಾರೆ.
ತಾಲೂಕಿನ ಸೋಮಾಪುರ ಹಾಗೂ ಲಕಮಾಪುರ ಗ್ರಾಮಕ್ಕೂ ಸೋಂಕು ಲಗ್ಗೆ ಇಟ್ಟಿದ್ದು, ಎರಡೂ ಗ್ರಾಮಗಳಲ್ಲಿ ಆತಂಕ ಮನೆ ಮಾಡಿದೆ. ಸೋಮಾಪುರದ 38 ವರ್ಷದ ಪುರುಷ, ಲಕಮಾಪುರದ 62 ವರ್ಷದ ಮಹಿಳೆಗೆ ಹಾಗೂ ಕುಂದಗೋಳ ತಾಲೂಕಿನ ಕೊಂಕಣಕುರಹಟ್ಟಿಯ 30 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಸೋಂಕು ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.