ಹುಬ್ಬಳ್ಳಿ: ಪಾಗಲ್ ಪ್ರೇಮಿಯೊಬ್ಬ ನಿರಂತರವಾಗಿ ಫೋನ್ ಮಾಡಿ ಇಲ್ಲಿನ ವಿಮಾನ ನಿಲ್ದಾಣದ ಸಿಬ್ಬಂದಿಯ ತಲೆ ಬಿಸಿ ಮಾಡಿದ್ದಾನೆ. ಇದರಿಂದ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಕಳೆದ ಎರಡು ವರ್ಷಗಳಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ನಿರಂತರವಾಗಿ ಫೋನ್ ಮಾಡಿದ್ದಲ್ಲದೆ ವಿಮಾನ ನಿಲ್ದಾಣವನ್ನು ಉಡಾಯಿಸುವುದಾಗಿ ಬೆದರಿಕೆ ಹಾಕುತ್ತಿದ್ದ. ಅಲ್ಲದೆ ಪ್ರಧಾನಿ ಮೋದಿ ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಮತ್ತೆ ಫೋನ್ ಮಾಡಿ ಬೆದರಿಕೆ ಹಾಕಿದ್ದಾನೆ ಎನ್ನಲಾಗುತ್ತಿದೆ. ಈತನ ಕರೆಯಿಂದ ಭದ್ರತಾ ಸಿಬ್ಬಂದಿಯ ಆತಂಕ ಹೆಚ್ಚಿಸಿದೆ.
ಗೋವಾ ಮೂಲದ ರಾಯ್ ಡಿಯಾಸ್ ಎಂಬ ವ್ಯಕ್ತಿಯಿಂದ ದಿನಂಪ್ರತಿ ಈ ಕರೆಗಳು ಬರುತ್ತಿದ್ದು ವಿಮಾನ ನಿಲ್ದಾಣದಲ್ಲಿ ತನ್ನ ಪ್ರೇಯಸಿಯೊಬ್ಬಳು ಕೆಲಸ ಮಾಡುತ್ತಿದ್ದಾಳೆ, ಅವಳಿಗೆ ಫೋನ್ ಕೊಡಿ ಎಂದು ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದಾನಂತೆ. ದುಬೈ ಮೂಲಕ ಇಂಟರ್ನೆಟ್ ಕರೆಗಳಲ್ಲದೇ ಬೇರೆ ಬೇರೆ ನಂಬರ್ನಿಂದಲೂ ಕರೆ ಮಾಡಿ ತೊಂದರೆ ಕೊಡುತ್ತಿದ್ದಾನೆ ಎಂದು ತಿಳಿದು ಬಂದಿದೆ.
ಈತನ ಪ್ರೇಯಸಿ ಈ ಮೊದಲು ಗೋವಾ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದು ಪಾಗಲ್ ಪ್ರೇಮಿಯ ಕಾಟ ತಾಳಲಾರದೇ ಗೋವಾದಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವರ್ಗಾವಣೆಗೊಂಡಿದ್ದಳು. ಅಂದಿನಿಂದ ಈತನ ಹುಚ್ಚಾಟ ತಪ್ಪಿಲ್ಲ. ಪಾಗಲ್ ಪ್ರೇಮಿಯು ಪ್ರತಿದಿನ ಕರೆ ಮಾಡುತ್ತಿದ್ದು ಇದರಿಂದ ಬೇಸತ್ತ ಸಿಬ್ಬಂದಿ, ಏರ್ ಟ್ರಾಫಿಕ್ ಕಂಟ್ರೋಲ್ ನಂಬರ್ ಸಹ ಬದಲಿಸಿತ್ತು. ಆದ್ರೆ ಹೇಗೋ ಮತ್ತೆ ನಂಬರ್ ತಗೆದುಕೊಂಡು ಕರೆ ಮಾಡುತ್ತಿದ್ದಾನೆ. ಇದರಿಂದ ಹಲವು ಸಾರಿ ವಿಮಾನ ಹಾರಾಟಕ್ಕೆ ತೊಂದರೆಯಾಗಿದೆ. ಈ ಬಗ್ಗೆ ಸೈಬರ್ ಕ್ರೈಮ್ನಲ್ಲಿ ದೂರು ಸಹ ದಾಖಲಾಗಿದೆ. ಆದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.