ಮಂಗಳೂರು/ಚಿಕ್ಕಮಗಳೂರು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಆರೋಪದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರನ್ನು ಪೊಲೀಸರು ಬಂಧಿಸಿದ್ದು, ಕೋರ್ಟ್ಗೆ ಹಾಜರುಪಡಿಸಿದ್ದಾರೆ.
ಈ ಮಧ್ಯೆ ಬಂಧನ ಅವರ ತವರು ಜಿಲ್ಲೆ ಚಿಕ್ಕಮಗಳೂರಿನಲ್ಲಿಂದು ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಿನ್ನೆ ಸಂಜೆಯಿಂದಲೂ ಪ್ರತಿಭಟನೆಯ ಕಾವು ಜೋರಾಗಿದ್ದು, ಇಂದು ಚಿಕ್ಕಮಗಳೂರು ನಗರ ಸಂಪೂರ್ಣ ಬಂದ್ ಮಾಡಲಾಗಿದೆ.
ನಿನ್ನೆ ರಾತ್ರಿ ಚಿಕ್ಕಮಗಳೂರು ನಗರದಲ್ಲಿ ಪ್ರತಿಭಟಿಸಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲು ಮಾಡಲಾಗಿದ್ದು, ಇಂದು 80-100 ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬಿಎನ್‌ಎಸ್ ಕಲಂ 143, 247, 199, 191, 126 (2), 324 (4) ಅಡಿ ಪ್ರಕರಣ ದಾಖಲಿಸಲಾಗಿದೆ. ಅನುಮತಿ ಪಡೆಯದೆ ಪ್ರತಿಭಟನೆ, ದೊಂಬಿ, ಗಲಾಟೆ, ಅಕ್ರಮ ಕೂಟ, ರಸ್ತೆ ತಡೆ, ಸಾರ್ವಜನಿಕರ ಆಸ್ತಿ ನಷ್ಟ, ಟೈರಿಗೆ ಬೆಂಕಿ, ಬಸ್ಗೆ ಕಲ್ಲು ತೂರಾಟ ಕುರಿತಂತೆ ಕೇಸ್ ಹಾಕಲಾಗಿದೆ.
ಮಂಗಳೂರಲ್ಲಿ ಬಿಜೆಪಿ ಶಾಸಕ ವಶಕ್ಕೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ತಿರುಚಲಾಗಿದೆ. ಸಿ.ಟಿ.ರವಿ ಅವರನ್ನು ಸುಳ್ಳು ಪ್ರಕರಣದಲ್ಲಿ ಬಂಧಿಸಿ ಹಲ್ಲೆಗೈಯಲಾಗಿದೆ ಎಂದು ಆರೋಪಿಸಿ ಮಂಗಳೂರಿನ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲೆತ್ನಿಸಿದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಸೇರಿದಂತೆ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ.
ಕಾಂಗ್ರೆಸ್ ಕಚೇರಿ ಮುಂಭಾಗ ಬ್ಯಾರಿಕೇಡ್ ಅಳವಡಿಸಿ ಮುತ್ತಿಗೆ ಹಾಕದಂತೆ ಪೊಲೀಸರು ಭದ್ರತೆ ಕಲ್ಪಿಸಿದ್ದರು. ಅಲ್ಲದೆ ಸ್ಥಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದರು.
ಕಾಂಗ್ರೆಸ್ ಕಚೇರಿಗಿಂತ ಅನತಿ ದೂರದಲ್ಲಿರುವ ಮಲ್ಲಿಕಟ್ಟೆ ಸರ್ಕಲ್ ಬಳಿ ಆಗಮಿಸಿದ ಪ್ರತಿಭಟನಾಕಾರರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಪ್ರತಿಭಟನಾಕಾರರು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತಳ್ಳಾಟ ನೂಕಾಟ ನಡೆಯಿತು. ಮಲ್ಲಿಕಟ್ಟೆ ಸರ್ಕಲ್ ಬಳಿಯೂ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಶಾಸಕ ವೇದವ್ಯಾಸ ಕಾಮತ್ ಸೇರಿದಂತೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಈ ವೇಳೆ ಸ್ವಲ್ಪಕಾಲ ಸಂಚಾರ ವ್ಯವಸ್ಥೆಗೆ ತೊಡಕು ಉಂಟಾಗಿತ್ತು.
ಇದನ್ನೂ ಓದಿ: ಸಿ.ಟಿ.ರವಿ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ: ಎಂಎಲ್ಸಿ ವಿರುದ್ಧ ಕಾಂಗ್ರೆಸ್ನಿಂದಲೂ ಆಕ್ರೋಶ - BJP PROTEST
ಶಿವಮೊಗ್ಗದಲ್ಲೂ ಪ್ರತಿಭಟನೆ: ಶಿವಮೊಗ್ಗ ಜಿಲ್ಲಾ ಬಿಜೆಪಿಯು ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿತು. ಯಾವುದೇ ರೀತಿ ಅವಾಚ್ಯ ಶಬ್ದಗಳಿಂದ ನಿಂದಸದೆ ಇದ್ರೂ ಸಹ ಕಾಂಗ್ರೆಸ್ನವರು ಸುಮ್ಮನೆ ಆರೋಪ ಮಾಡಿ, ಬಂಧಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಸಿ.ಟಿ.ರವಿ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು. ಎಂಎಲ್ಸಿ ಧನಂಜಯ್ಸ ಸರ್ಜಿ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಇನ್ನು ಚಾಮರಾಜನಗರದಲ್ಲಿಯೂ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ನಡೆಸಿ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿತು. ಚಾಮರಾಜೇಶ್ವರ ದೇಗುಲ ಮುಂಭಾಗದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಬಿಜೆಪಿಗರು ಭುವನೇಶ್ವರಿ ವೃತ್ತದಲ್ಲಿ ಅರ್ಧ ತಾಸಿಗೂ ಅಧಿಕ ಕಾಲ ರಸ್ತೆ ತಡೆದು ಆಕ್ರೋಶ ಹೊರಹಾಕಿದರು. ಈ ವೇಳೆ 20ಕ್ಕೂ ಅಧಿಕ ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು ಕರೆದೊಯ್ದರು.
ಹಾಸನದಲ್ಲೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿ, ಸಿ.ಟಿ.ರವಿ ಬಂಧನ ಪೂರ್ವ ನಿಯೋಜಿತ. ಕೂಡಲೇ ಅವರನ್ನು ಬಿಡುಗಡೆ ಮಾಡುವ ಜೊತೆಗೆ ಅವರ ಮೇಲೆ ಹಲ್ಲೆ ಮಾಡಿರುವ ಕಾಂಗ್ರೆಸ್ ಪಕ್ಷದ ಕಿಡಿಗೇಡಿಗಳನ್ನು ಬಂಧಿಸಿ ನ್ಯಾಯಾಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ತಕ್ಷಣವೇ ಸಿ.ಟಿ.ರವಿ ಬಿಡುಗಡೆಗೆ ಆದೇಶಿಸಿ 'ಜನಪ್ರತಿನಿಧಿಗಳಾಗಿ ಆರೋಪಿ, ದೂರುದಾರರ ವರ್ತನೆ ದುರದೃಷ್ಟಕರ' ಎಂದ ಹೈಕೋರ್ಟ್