ಚಿಕ್ಕಮಗಳೂರು: ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಎನ್.ಪುರ ತಾಲೂಕಿನ ಮಡುಬೂರು ಸಮೀಪದ ಯಕ್ಕಡಬೈಲು ಗ್ರಾಮದಲ್ಲಿ ಗುರುವಾರ ನಡೆದಿದೆ. ಏಲಿಯಾಸ್ (75) ಮೃತ ದುರ್ದೈವಿ. ಜಾನುವಾರುಗಳನ್ನು ಹುಡುಕಿಕೊಂಡು ಕಾಡಿಗೆ ಹೋಗಿದ್ದಾಗ ಘಟನೆ ನಡೆದಿದೆ.
ಮೇಯಲು ಹೋಗಿದ್ದ ಜಾನುವಾರುಗಳು ಬಾರದ ಹಿನ್ನೆಲೆಯಲ್ಲಿ ತಂದೆ ಏಲಿಯಾಸ್ ಮತ್ತು ಮಗ ವರ್ಗಿಸ್ ಇಬ್ಬರೂ ಹುಡುಕಿಕೊಂಡು ಕಾಡಿಗೆ ತೆರಳಿದ್ದರು. ಈ ವೇಳೆ ಏಲಿಯಾಸ್ ಮೇಲೆ ಹಠಾತ್ ಎರಗಿರುವ ಕಾಡಾನೆ ಆತನನ್ನು ತುಳಿದು ಸಾಯಿಸಿದೆ.
ದಾಳಿ ವೇಳೆ ಅದೃಷ್ಟವೆಂಬಂತೆ ಮಗ ವರ್ಗಿಸ್ ಪಾರಾಗಿ ಬಂದಿದ್ದಾರೆ. ಏಲಿಯಾಸ್ ಮೇಲೆ ದಾಳಿ ನಡೆಸಿದ ನಂತರವೂ ಕಾಡಾನೆ ಮೃತದೇಹದ ಸುತ್ತ ಘೀಳಿಡುತ್ತಾ ಓಡಾಡಿದೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದರಿಂದ ಜನರು ಹತ್ತಿರ ಹೋಗುವುದಕ್ಕೂ ಭಯಪಡುವ ಪರಿಸ್ಥಿತಿ ಇತ್ತು.
ಸುದ್ದಿ ತಿಳಿದು ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ, ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಹಾಗೂ ಕುಟುಂಬ ಸದಸ್ಯರು, ಕೂಡಲೇ ಈ ಆನೆಯನ್ನು ಬೇರೆಡೆ ಸ್ಥಳಾಂತರ ಮಾಡುವಂತೆ ಒತ್ತಾಯಿಸಿದ್ದಾರೆ.
ಇತ್ತೀಚೆಗಷ್ಟೇ ಎನ್.ಆರ್.ಪುರ ತಾಲೂಕಿನ ಸೀತೂರಿನಲ್ಲಿ ಉಮೇಶ್ ಎಂಬುವರನ್ನು ಕಾಡನೆ ತುಳಿದು ಬಲಿ ಪಡೆದಿತ್ತು. ಅರಣ್ಯ ಸಚಿವ ಈಶ್ವರ್ ಖಂಡ್ರೆ ಹಾಗೂ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಮೃತ ಉಮೇಶನ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಈ ಬೆನ್ನಲ್ಲೇ ಮತ್ತೊಂದು ದುರಂತ ಸಂಭವಿಸಿದೆ.
ಇದನ್ನೂ ಓದಿ: ಆನೆ ಕಾರ್ಯ ಪಡೆ ಹಾಗೂ ಕ್ಷಿಪ್ರ ಸ್ಪಂದನ ತಂಡಗಳ ರಚನೆ: ಸಚಿವ ಈಶ್ವರ ಖಂಡ್ರೆ - MINISTER ESHWAR KHANDRE