ಬೆಳಗಾವಿ: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ಬಂಧನ ಖಂಡಿಸಿ ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ಕಾಂಗ್ರೆಸ್ ಸರ್ಕಾರ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ರಸ್ತೆ ತಡೆದು, ಕಾಂಗ್ರೆಸ್ ಗೂಂಡಾ ಸರ್ಕಾರ ಎಂದು ಹರಿಹಾಯ್ದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ರೈತರು ಸೌಧದೊಳಗೆ ಬಂದು ಚರ್ಚಿಸುತ್ತೇವೆ ಎಂದರೆ ಲಾಠಿ ಚಾರ್ಚ್ ಮಾಡುತ್ತೀರಿ. ಪಂಚಮಸಾಲಿಗರ ಮೇಲೂ ಲಾಠಿ ಬೀಸಿದ್ದೀರಿ. ಸೌಧದೊಳಗೆ ನುಗ್ಗಿ ಜನಪ್ರತಿನಿಧಿಗಳ ಮೇಲೆ ಹಲ್ಲೆ ಮಾಡಲು ಬಿಟ್ಟಿದ್ದೀರಿ. ಅಧಿಕಾರ ಶಾಶ್ವತವಲ್ಲ, ಅಧಿಕಾರದ ಮದ, ದರ್ಪ ಮತ್ತು ಅಮಲಿನಿಂದ ದೌರ್ಜನ್ಯ ಎಸಗುತ್ತಿದ್ದೀರಿ. ಜನಪ್ರತಿನಿಧಿಗಳ ಮೇಲೆ ಹಲ್ಲೆ ಎಸಗಿದವರನ್ನು ಬಿಟ್ಟು, ಶಾಸಕರನ್ನೇ ಬಂಧಿಸಿರುವ ಧೋರಣೆ ಖಂಡನೀಯ ಎಂದು ಕಿಡಿಕಾರಿದರು.
ಸದನದೊಳಗೆ ನಡೆದಿರುವುದಕ್ಕೆ ಸಭಾಪತಿಗಳು ರೂಲಿಂಗ್ ನೀಡುತ್ತಾರೆ. ಸಿ.ಟಿ.ರವಿ ಅವರನ್ನು ರಾತ್ರಿ ಎಲ್ಲಾ ಐದನೂರು ಕಿ.ಮೀ ಓಡಾಡಿಸಿದ್ದಾರೆ. ಇದು ಕಾಂಗ್ರೆಸ್ ಸರ್ಕಾರವೋ ಹಿಟ್ಲರ್ ಸರ್ಕಾರವೋ? ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿಸಿದ ಅಪಕೀರ್ತಿ ಈ ಸರ್ಕಾರಕ್ಕೆ ಸಲ್ಲುತ್ತದೆ. ರಕ್ತ ಸುರಿಯುತ್ತಿದ್ದರೂ ಆಸ್ಪತ್ರೆಗೆ ಕರೆದುಕೊಂಡು ಹೋಗಿಲ್ಲ. ಕುಡಿಯಲು ನೀರು, ಒಂದು ತುತ್ತು ಊಟ ನೀಡಿಲ್ಲ. ಮನುಷ್ಯತ್ವ ಇರುವ ಸರ್ಕಾರ ಈ ರೀತಿ ಮಾಡಲ್ಲ. ಸಿ.ಟಿ.ರವಿ ಉಗ್ರವಾದಿನಾ? ಸಿ.ಟಿ.ರವಿ ಮೇಲಿನ ಕೇಸ್ ಹಿಂಪಡೆಯಬೇಕು. ಹಲ್ಲೆಗೆ ಯತ್ನಿಸಿದವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಸಿ.ಟಿ.ರವಿ ಅವರನ್ನು ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನವರೆಗೂ ವಿನಾಕಾರಣ ಸುತ್ತಿಸಿದ್ದಾರೆ. ರಾಮದುರ್ಗ ಹೊರವಲಯದ ದೊಡ್ಡ ಕಂದಕವೊಂದರಲ್ಲಿ ರಾತ್ರಿ ವಾಹನ ನಿಲ್ಲಿಸಿ ಎನ್‌ಕೌಂಟರ್ ಮಾಡಲು ಯತ್ನಿಸಿದ್ದಾರೆ. ಆದರೆ, ಅವರ ವಾಹನವನ್ನು ಬೆನ್ನಟ್ಟಿದ ಬಿಜೆಪಿಯ ನಾಯಕರು ಅದನ್ನು ತಪ್ಪಿಸಿದ್ದಾರೆ. ಹಿಂದೆ ಬಿಹಾರದಲ್ಲಿ ಲಾಲೂ ಪ್ರಸಾದ್ ಎಂಬ ಮನೆಹಾಳ ಇದ್ದ. ಇಲ್ಲಿರುವುದು ಅವನದೇ ಶಿಷ್ಯರ ಸರ್ಕಾರ. ಕರ್ನಾಟಕವನ್ನೂ ಇವರು ಬಿಹಾರ ಮಾಡಿದ್ದಾರೆ. ಕಾನೂನು ಉಲ್ಲಂಘನೆ ಮಾಡಿದ್ದಾರೆ. ಇದರ ಬಗ್ಗೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಎಚ್ಚರಿಸಿದರು.
ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದವರನ್ನು ರಕ್ಷಿಸಿದರು. ದಾಖಲೆ ನೋಡಿ, ವಿಧಿವಿಜ್ಷಾನ ವರದಿ ಬಂದ ಮೇಲೆ ಎಫ್‌ಐಆರ್ ದಾಖಲಿಸಿದರು. ಆದರೆ, ರವಿ ಅವರಂಥ ಜನಪ್ರತಿನಿಧಿ, ಹಿಂದೂ ಹೋರಾಟಗಾರರನ್ನು ನೇರವಾಗಿ ಬಂಧಿಸಿದ್ದಾರೆ. ಸಿದ್ದರಾಮಯ್ಯ ಅವರೇ ನೀವು ಹೊರನಡೆದಿರುವ ಮುಖ್ಯಮಂತ್ರಿ. ಈ ಅಧಿಕಾರ ರೊಟ್ಟಿ ತಿರುವು ಹಾಕಿದಷ್ಟೇ ಸುಲಭ. ಪ್ರಕರಣದ ಬಗ್ಗೆ ಬಹಿರಂಗ ಹೇಳಿಕೆ ನೀಡಲು ನೀವ್ಯಾರು? ಮುಖ್ಯಮಂತ್ರಿ ಅಧಿಕಾರವನ್ನು ಒದ್ದು ಕಿತ್ತುಕೊಳ್ಳುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಿಮ್ಮ ಗತಿ ಏನಾಗುತ್ತದೆ ನೋಡಿಕೊಳ್ಳಿ ಎಂದು ಆರ್.ಅಶೋಕ ಹರಿಹಾಯ್ದರು.
ಶಾಸಕ ಅಭಯ್ ಪಾಟೀಲ್ ಮಾತನಾಡಿ, ಸಿ.ಟಿ.ರವಿ ಅವರನ್ನು ನಿನ್ನೆ ರಾತ್ರಿ ಜಿಲ್ಲೆಯ ಬೇರೆ ಬೇರೆ ಕಡೆ ಕರೆದುಕೊಂಡು ಹೋಗಿ ಎನ್‌ಕೌಂಟರ್ ಮಾಡಲು ಪೊಲೀಸರು ಯತ್ನಿಸಿದ್ದಾರೆ. ಅಲ್ಲದೇ, ಶಾಸಕರ ಮೇಲೆ ಸುವರ್ಣ ವಿಧಾನಸೌಧದೊಳಗೆ ಹಲ್ಲೆ ಮಾಡಿ, ಕೊಲೆಗೆ ಯತ್ನಿಸಿದವರ ವಿರುದ್ಧ ಕ್ರಮ ಕೈಗೊಳ್ಳದೇ ರಕ್ಷಿಸುತ್ತಿದ್ದಾರೆ. ಸೌಧದೊಳಗೆ ಶಾಸಕರಿಗೆ ಭದ್ರತೆ ಇಲ್ಲ ಎಂದರೆ ಬೆಳಗಾವಿಯಲ್ಲಿ ಜನಸಾಮಾನ್ಯರ ಗತಿ ಏನು? ಕಾಂಗ್ರೆಸ್ನವರು ಇದೇ ತಿಂಗಳು 26-27ರಂದು ಸಮಾವೇಶ ಹಮ್ಮಿಕೊಂಡಿದ್ದಾರೆ. ಆ ವೇಳೆ ಲಕ್ಷ ಜನರನ್ನು ಸೇರಿಸಿ ಪ್ರತಿಭಟಣೆ ಮಾಡೋಣ ಎಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಶಾಸಕರಾದ ಸುನೀಲ್ ಕುಮಾರ್, ಅರವಿಂದ ಬೆಲ್ಲದ್, ಪರಿಷತ್ ಸದಸ್ಯ ಎನ್.ರವಿಕುಮಾರ್, ಮಾಜಿ ಶಾಸಕರಾದ ಸಂಜಯ ಪಾಟೀಲ್, ಮಹಾಂತೇಶ ದೊಡ್ಡಗೌಡರ್ ಸೇರಿ ಮತ್ತಿತರರು ಇದ್ದರು.
ಇದನ್ನೂ ಓದಿ: ಸಿ ಟಿ ರವಿ ಕೀಳುಭಾಷೆ ಬಳಸಿದ್ದನ್ನು ಸ್ಥಳದಲ್ಲಿದ್ದವರು ಕೇಳಿಸಿಕೊಂಡಿದ್ದಾರೆ: ಸಿಎಂ ಸಿದ್ದರಾಮಯ್ಯ - MLC CT RAVI ARRESTED