ಧಾರವಾಡ: ಹಣ ಪಡೆದು ಖರೀದಿ ಪತ್ರ ನೊಂದಾಯಿಸಿ ಕೊಡದ ಬಿಲ್ಡರ್ಗೆ ಜಿಲ್ಲಾ ಗ್ರಾಹಕರ ಆಯೋಗದಿಂದ ದಂಡ ಮತ್ತು ಪರಿಹಾರ ನೀಡಿ ಆದೇಶಿಸಿದೆ. ಹುಬ್ಬಳ್ಳಿಯ ಗಣೇಶಪೇಟೆ ನಿವಾಸಿ ವಿಜಯ ಸುಳ್ಳದ ಎಂಬುವವರು ಜಯಶ್ರೀ ಜೋಶಿ ಹಾಗೂ ರಾಘವೇಂದ್ರ ಜೋಶಿ ಡೆವಲಪರ್ಗಳಿಂದ 2 ನಿವೇಶನಗಳನ್ನು 44 ಲಕ್ಷ ರೂಗಳಿಗೆ ಖರೀದಿಸುವ ಕುರಿತು ದಿ: 24-05-2017 ಖರೀದಿ ಕರಾರು ಒಪ್ಪಂದ ಮಾಡಿಕೊಂಡಿದ್ದರು. ದೂರುದಾರರು ಮುಂಗಡ ಹಣ ರೂ. 40 ಲಕ್ಷ ರೂಪಾಯಿ ಪಾವತಿಸಿದ್ದರು.
ಆದರೆ, ಡೆವಲಪರ್ಸ್ ಅವರು ಖರೀದಿ ಕರಾರು ಒಪ್ಪಂದದಂತೆ 2 ವರ್ಷಗಳೊಳಗಾಗಿ ನಿವೇಶನಗಳನ್ನು ಅಭಿವೃದ್ಧಿಪಡಿಸುವಲ್ಲಿ ಹಾಗೂ ಖರೀದಿ ಪತ್ರ ಮಾಡಿಕೊಟ್ಟಿರಲಿಲ್ಲ. ಒಂದಿಲ್ಲೊಂದು ನೆಪ ಹೇಳಿ ಖರೀದಿ ಪತ್ರ ಬರೆದುಕೊಡದೇ ಬಿಲ್ಡರ್ ಸತಾಯಿಸಿ ಸೇವಾ ನ್ಯೂನತೆ ಎಸಗಿ ಮೋಸ ಮಾಡಿದ್ದಾರೆ ಎಂದು ಹೇಳಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ದೂರಿನ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತ ಹಾಗೂ ವಿಶಾಲಾಕ್ಷಿ ಬೋಳಶೆಟ್ಟಿ, ಪ್ರಭು ಹಿರೇಮಠ ಸದಸ್ಯರು ದೂರುದಾರರಿಂದ ಮುಂಗಡವಾಗಿ ಪಡೆದ ಹೇರಳ ಮೊತ್ತದ ಹಣವನ್ನು ಡೆವಲಪರ್ಗಳು ತಮ್ಮ ವೈಯಕ್ತಿಕ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡು ದೂರುದಾರನಿಗೆ ನಿವೇಶನ ಅಭಿವೃದ್ದಿಪಡಿಸಿ ಖರೀದಿ ಪತ್ರ ನೋಂದಣಿ ಮಾಡಿಕೊಡದೇ ಇರುವುದು ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ಡೆವಲಪರ್ಗಳು 2 ತಿಂಗಳ ಒಳಗಾಗಿ ನಿವೇಶನ ಅಭಿವೃದ್ಧಿಪಡಿಸಿ ದೂರುದಾರನಿಗೆ ಖರೀದಿ ಪತ್ರ ಬರೆದುಕೊಡುವಂತೆ ಆದೇಶಿಸಿದೆ.
ಅದಕ್ಕೆ ವಿಫಲರಾದಲ್ಲಿ ದೂರುದಾರರಿಂದ ಪಡೆದ 40 ಲಕ್ಷ ರೂಪಾಯಿ ಮೇಲೆ ಶೇ. 8ರಷ್ಟು ಬಡ್ಡಿ ಲೆಕ್ಕ ಹಾಕಿ ಸಂದಾಯ ಮಾಡುವಂತೆ ಹಾಗೂ ಮಾನಸಿಕ ತೊಂದರೆಗೆ ರೂ.1.00.000 ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ ರೂ. 10.000 ಗಳನ್ನು ಕೊಡುವಂತೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.
ಓದಿ: ಫ್ಲಾಟ್ ಕೊಡದ ಬಿಲ್ಡರ್ಗೆ 5 ಲಕ್ಷ ದಂಡ : ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದ ಆದೇಶ