ಹುಬ್ಬಳ್ಳಿ: ನವಲಗುಂದ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯಲ್ಲಿ ಕಾಂಗ್ರೆಸ್ನವರು ಬಿಜೆಪಿ ಜೊತೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಜೆಡಿಎಸ್ ಮಾಜಿ ಶಾಸಕ ಎನ್.ಹೆಚ್.ಕೋನರೆಡ್ಡಿ ಆರೋಪಿಸಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಸ್ಥಳೀಯ ಮಟ್ಟದಲ್ಲಿ ಕೋಮುವಾದಿ ಪಕ್ಷದ ಜೊತೆ ಕಾಂಗ್ರೆಸ್ ಕೈಜೋಡಿಸುವ ಮೂಲಕ ಜೆಡಿಎಸ್ ಮುಗಿಸುವ ಹುನ್ನಾರ ನಡೆಸಿದೆ. ಕಾಂಗ್ರೆಸ್ ಪಕ್ಷ ಬಿಜೆಪಿಯ ಬೆಂಬಲ ಪಡೆದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿಯೂ ಮೈತ್ರಿ ಮಾಡಿಕೊಳ್ಳಲಿ ಎಂದು ಕಿಡಿಕಾರಿದರು.
ಕಾಂಗ್ರೆಸ್ನವರು ನಮ್ಮ ಪಕ್ಷವನ್ನು ಬೇಕಾದಾಗ ಬಳಸಿಕೊಂಡು ಬೇಡವಾದಾಗ ದೂರ ಮಾಡುವ ಪ್ರವೃತ್ತಿ ಸರಿಯಲ್ಲ. ಇದು ಬಿಜೆಪಿ ಹಾಗೂ ಕಾಂಗ್ರೆಸ್ನ ಅಧಿಕಾರ ದಾಹವನ್ನು ಎತ್ತಿ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.