ಹುಬ್ಬಳ್ಳಿ: ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಶನಿಗಳಂತೆ ಒಕ್ಕರಿಸಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಎಲ್ಲ ವ್ಯವಸ್ಥೆಗಳಲ್ಲಿ ವಿಫಲವಾಗಿದೆ. ದೇಶದಲ್ಲಿ ಪ್ರಜಾಸತ್ತಾತ್ಮಕ ವಾತಾವರಣವಿಲ್ಲ. ದೇಶದಲ್ಲಿ ಅಮಿತ್ ಶಾ ಹಾಗೂ ಮೋದಿಯವರ ಸರ್ವಾಧಿಕಾರ ಪ್ರವೃತ್ತಿ ನಡೆಯುತ್ತಿದೆ. ದೇಶದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ನೆಲಕಚ್ಚಿದೆ. ಭಾವನಾತ್ಮಕವಾಗಿ ದೇಶದ ಜನರ ದಾರಿಯನ್ನು ತಪ್ಪಿಸುತ್ತಿದ್ದಾರೆ. ರಾಜ್ಯ ಹಾಗೂ ದೇಶದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿದರು.
ಇನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದ ಕುರಿತು ಮಾತನಾಡಿದ ಅವರು, ಬಾಂಬರ್ ಆದಿತ್ಯ ರಾವ್ ತಾನಾಗಿಯೇ ಶರಣಾಗಿದ್ದಾನೆ. ಇಲ್ಲವಾಗಿದ್ದರೆ ಏನು ಮಾಡುತ್ತಿದ್ದೀರಿ ಬಸವರಾಜ ಬೊಮ್ಮಾಯಿಯವರೇ? ಎಂದು ಪ್ರಶ್ನಿಸಿದರು. ರಾಜ್ಯ ಹಾಗೂ ದೇಶದ ಬೇಹುಗಾರಿಕೆ ಇಲಾಖೆಯವರು ಸತ್ತು ಹೋಗಿದ್ದಾರೆ. ಬೇಹುಗಾರಿಕೆ ಇಲಾಖೆ ನಿಷ್ಕ್ರೀಯಗೊಂಡಿರುವುದಕ್ಕೆ ನೇರವಾಗಿ ರಾಜ್ಯ ಹಾಗೂ ಕೇಂದ್ರ ಗೃಹ ಸಚಿವರೇ ನೇರಹೊಣೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಭೇಟಿಯಾಗಲು ಮೋದಿ ಹಾಗೂ ಅಮಿತ್ ಶಾ ಸಮಯವಕಾಶ ನೀಡುತ್ತಿಲ್ಲ. ಇದು ಮುಖ್ಯಮಂತ್ರಿಗೆ ಆದ ಅವಮಾನವಲ್ಲ. ಇಡೀ ರಾಜ್ಯಕ್ಕೆ ಆದ ಅವಮಾನ. ಮೋದಿ ಹಾಗೂ ಶಾ ರಾಜ್ಯಕ್ಕೆ ಮಾಡಿದ ಅವಮಾನವಾಗಿದೆ ಎಂದು ಇದೇ ವೇಳೆ ಹರಿಹಾಯ್ದರು.