ಹುಬ್ಬಳ್ಳಿ: 31 ವರ್ಷದ ಹಿಂದಿನ ಗಲಭೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಶಹರ್ ಪೊಲೀಸ್ ಠಾಣೆ ಎದುರು ಪ್ರತಿಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಕಾರ್ಯಕರ್ತರು ಶಹರ್ ಠಾಣೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಮಯದಲ್ಲಿ ಆರ್. ಅಶೋಕ್ ಮತ್ತು ಬಿಜೆಪಿ ಮಹಿಳಾ ಘಟಕದ ಸದಸ್ಯರು ಸೇರಿದಂತೆ ಹಲವು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡ ಪೊಲೀಸ್ ಸಿಬ್ಬಂದಿ ಬಸ್ನ ಮೂಲಕ ಕರೆದುಕೊಂಡು ಹೋದರು.
ಇದಕ್ಕೂ ಮುನ್ನ ಮಾತನಾಡಿದ ಆರ್. ಅಶೋಕ್ ಅವರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ''ಇವತ್ತು ನಾವು ಹೋರಾಟ ಕೈಗೊಂಡಿದ್ದೇವೆ. ಹಿಂದೂ ಕಾರ್ಯಕರ್ತನನ್ನು ಬಿಡುಗಡೆ ಮಾಡಬೇಕು. ಇನ್ಸ್ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳಬೇಕು'' ಎಂದು ಒತ್ತಾಯಿಸಿದರು.
''ರಾಮಭಕ್ತರನ್ನ ಬಂಧಿಸಿದ್ದನ್ನು ಖಂಡಿಸುತ್ತೇನೆ. ರಾಮ ಭಕ್ತರನ್ನು ಬಂಧನ ಮಾಡುವ ಹುನ್ನಾರವನ್ನು ಕಾಂಗ್ರೆಸ್ ಮಾಡುತ್ತಿದೆ. ಸುಮಾರು 56,000 ಪೆಂಡಿಂಗ್ ಎಲ್‌ಪಿಸಿ ಕೇಸ್ಗಳು ಇವೆ. ಆದ್ರೆ ಅವೆಲ್ಲವನ್ನು ಬಿಟ್ಟು ಹುಬ್ಬಳ್ಳಿ ಕಡೆ ಬಂದಿರೋದು ಯಾಕೆ. ಶ್ರೀಕಾಂತ್ ಪೂಜಾರಿಯನ್ನು ಬಂಧನ ಮಾಡಿದ್ದು, ನ್ಯಾಯಾನಾ'' ಎಂದು ಪ್ರಶ್ನಿಸಿದರು.
''ತಾಕತ್ತಿದ್ದರೆ ಎಲ್ಲರನ್ನು ಬಂಧಿಸಿ ನೋಡೋಣ. ನನ್ನ ಮೇಲೂ ಕೇಸ್ ಇದೆ ಬಂಧಿಸಿ ನೋಡೋಣ. ಕಾಂಗ್ರೆಸ್ ಪಕ್ಷ ಸೋಲಿನ ಭಯದಿಂದ ಹೀಗೆ ಮಾಡುತ್ತಿದೆ. ಬೇರೊಂದು ಸಮುದಾಯದ ಓಲೈಕೆಗಾಗಿ ಈ ರೀತಿ ಮಾಡುತ್ತಿದ್ದಾರೆ'' ಎಂದು ಆರೋಪಿಸಿದರು.
ಹರಿಪ್ರಸಾದ್ ಅವರ ಹೇಳಿಕೆ ಖಂಡಿಸಿದ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್, ''ಹಿಂದೂಗಳನ್ನು ರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿ. ರಾಜಕೀಯ ನಾಯಕರೊಬ್ಬರು ಹೀಗೆ ಹೇಳುತ್ತಾರಂದರೆ ಸರ್ಕಾರ ಏನು ಮಾಡುತ್ತಿದೆ'' ಎಂದು ಇದೇ ವೇಳೆ ಪ್ರಶ್ನಿಸಿದರು.
ಹು-ಧಾ ಪೊಲೀಸ್ ಕಮೀಷನರ್ ಪ್ರತಿಕ್ರಿಯೆ: ಪೊಲೀಸ್ ಠಾಣೆ ಮುತ್ತಿಗೆ ಪ್ರಕರಣಕ್ಕೆ ಹು-ಧಾ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಮಾತನಾಡಿ, ''ಶಹರ್ ಠಾಣೆ ಮುತ್ತಿಗೆ ಹಾಕಲು ಯತ್ನಿಸಿದ 150 ಜನರನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತೆ. ಅವರ ಬೇಡಿಕೆಯನ್ನು ಕಾನೂನು ಬದ್ಧವಾಗಿ ಪರಿಶೀಲಿಸುತ್ತೇವೆ. ಪೊಲೀಸ್ ಇನಸ್ಪೆಕ್ಟರ್ ಅಮಾನತು ಮಾಡುವಂತೆ ಒತ್ತಾಯಿಸಿದ್ದಾರೆ. ನಮ್ಮ ಇಲಾಖೆಯದ್ದೆ ನಿಯಮಗಳಿವೆ. ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತೆ'' ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಬಿಜೆಪಿಯವರಿಗೆ ಕೆಲಸವಿಲ್ಲದೆ, ದುರುದ್ದೇಶದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ: ಸಚಿವ ಮಧು ಬಂಗಾರಪ್ಪ