ಹುಬ್ಬಳ್ಳಿ: ಪೊಲೀಸರ ಸೋಗಿನಲ್ಲಿ ಬಂದ ವ್ಯಕ್ತಿಯೋರ್ವ ಬೈಕ್ ಕಳ್ಳತನ ಮಾಡಿಕೊಂಡು ಪರಾರಿಯಾದ ಘಟನೆ ನಗರದಲ್ಲಿ ನಡೆದಿದೆ.
ನಗರದ ಯುವಕನೊಬ್ಬ ನಗರದ ಕೃಷ್ಣ ಕಲ್ಯಾಣ ಮಂಟಪದ ರಸ್ತೆ ಬದಿ ನಿಂತಿದ್ದ. ಪೊಲೀಸ್ ಉಡುಗೆಯಲ್ಲಿ ಬಂದ ವ್ಯಕ್ತಿಯೋರ್ವ ರಸ್ತೆಯಲ್ಲಿ ನಿಂತಿದ್ದಕ್ಕೆ 500 ರೂ. ದಂಡ ಕಟ್ಟು ಎಂದು ಕೇಳಿದ್ದಾನೆ. ಆಗ ನಾನೇನು ತಪ್ಪು ಮಾಡಿಲ್ಲ. ದಂಡ ಯಾವುದಕ್ಕೆ ಕಟ್ಟಬೇಕು ಎಂದು ಹೇಳಿದ್ದಾನೆ. ಆಗ ದಂಡ ಕಟ್ಟಲಾಗದಿದ್ದರೆ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಗೆ ಬಂದು ದಂಡ ಕಟ್ಟಿ ಬೈಕ್ ಬಿಡಿಸಿಕೋ ಎಂದು ಹೇಳಿ ಬೈಕ್ ತೆಗೆದುಕೊಂಡು ಹೋಗಿದ್ದಾನೆ.
ಆದರೆ ನಂತರ ಠಾಣೆಗೆ ಹೋಗಿ ವಿಚಾರಣೆ ಮಾಡಿದರೆ, ಅಲ್ಲಿಗೆ ಯಾವುದೇ ಬೈಕ್ ಪೊಲೀಸ್ ಠಾಣೆಗೆ ಬಂದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಹುಬ್ಬಳ್ಳಿ ಪೊಲೀಸರ ಹೆಸರಿನಲ್ಲಿ ರಾಯಲ್ ಎನ್ಫೀಲ್ಡ್ ಬೈಕ್ ತೆಗೆದುಕೊಂಡು ಹೋದ ಖದೀಮ ಯಾರು ಎಂದು ಸ್ವತಃ ಪೊಲೀಸರೇ ದಂಗಾಗಿದ್ದಾರೆ. ಈ ಕುರಿತು ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೈಕ್ ಪತ್ತೆ ಕಾರ್ಯ ಮುಂದುವರೆದಿದೆ.