ಧಾರವಾಡ: ಬಿಬಿಎಂಪಿಯಲ್ಲಿ ಅವ್ಯವಹಾರ ವಿಚಾರವಾಗಿ 6 ತಿಂಗಳಲ್ಲಿ ವರದಿ ನೀಡಲು ಹೈಕೋರ್ಟ್ ಆದೇಶ ನೀಡಿದೆ ಎಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.
ಜಿಲ್ಲೆಯ ನವಲಗುಂದ ತಾಲೂಕಿನ ಅಮರಗೋಳ ಗ್ರಾಮದಲ್ಲಿ ಆಯೋಜಿಸಿದ್ದ ಮಲಪ್ರಭಾ ಮುಖ್ಯ ಕಾಲುವೆ ಹಂಚು ಮತ್ತು ಉಪಹಂಚು ಎರಡನೇ ಹಂತದ ಕಾಮಗಾರಿಗೆ ಚಾಲನೆ ನೀಡಿದ್ರು.
ಬಳಿಕ ಮಾತನಾಡಿ, ಬಿಬಿಎಂಪಿಯಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ 6 ತಿಂಗಳಲ್ಲಿ ವರದಿ ನೀಡುವಂತೆ ಹೈಕೋರ್ಟ್ ಆದೇಶ ನೀಡಿದೆ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ನೀವೆಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೀರಿ ಅನ್ನೋದನ್ನು ಇದೀಗ ನಾವು ನೋಡಬೇಕಿದೆ. ಮಲಪ್ರಭಾ ಕಾಲುವೆ ದುರಸ್ತಿಗೆ ಒಂದು ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಗುತ್ತಿಗೆದಾರರೊಂದಿಗೆ ಶಾಮೀಲಾಗದೇ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮಹದಾಯಿ ವಿಷಯದ ಕುರಿತು ಮಾತನಾಡಿದ ಸಿಎಂ ಅವರು, ಮಹದಾಯಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ. ಮಹದಾಯಿ ಕಳಸಾ ಬಂಡೂರಿ ಬಗ್ಗೆ ಕಾಳಜಿಯಿದೆ ಎಂದರು.
ನೇಗಿಲು ನೀಡಿ ಸನ್ಮಾನ:
ಕಾರ್ಯಕ್ರಮದ ವೇದಿಕೆ ಮೇಲೇರಿದ ಮಹದಾಯಿ ಹೋರಾಟಗಾರರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನೇಗಿಲು ನೀಡಿ ಸನ್ಮಾನಿಸಿದರು. ಬಳಿಕ ಮಹದಾಯಿ ಹೋರಾಟಗಾರರಿಂದ ಮುಖ್ಯಮಂತ್ರಿ ಮನವಿ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದ ಜಗದೀಶ ಶೆಟ್ಟರ್, ಸಿ.ಸಿ. ಪಾಟೀಲ್, ಶಾಸಕರಾದ ಕಳಕಪ್ಪ ಬಂಡಿ, ಅಮೃತ ದೇಸಾಯಿ, ಸಿ.ಎಂ. ನಿಂಬಣ್ಣವರ ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.