ಹುಬ್ಬಳ್ಳಿ: ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಾಮನ್ಸೆನ್ಸ್ ಇಲ್ಲ. ದೇಶದ ಅಭಿವೃದ್ಧಿಗಾಗಿ ಭಾರತದ ನಾಯಕತ್ವ ಮೋದಿ ಅವರ ಕೈಯಲ್ಲಿರಲಿ ಎಂಬುದು ಜನರ ತೀರ್ಪು. ಆ ತೀರ್ಪನ್ನು ಧಿಕ್ಕಾರ ಮಾಡುತ್ತೀರಿ ಎಂದರೆ ನಿಮಗೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಿಡಿಕಾರಿದರು.
ಜನರ ತೀರ್ಪನ್ನು ಅವಹೇಳನ ಮಾಡಿದ್ದು ಪ್ರಜಾತಂತ್ರ ವ್ಯವಸ್ಥೆಗೆ ಮಾಡಿದ ಅಪಮಾನ. ಇದಕ್ಕಾಗಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಇಬ್ಬರೂ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಸಾಮಾನ್ಯ ಜ್ಞಾನವಿಲ್ಲದ ಈ ರಾಜಕಾರಣಿಗಳು ರಾಜಕೀಯದಿಂದ ನಿವೃತ್ತಿಯಾಗಲಿ ಎಂದು ಆಕ್ರೋಶ ಹೊರಹಾಕಿದರು. ಕರ್ನಾಟಕದ ಅಭಿವೃದ್ಧಿಗೆ ಮೈತ್ರಿ ಸರ್ಕಾರದ ಕೊಡುಗೆ ಶೂನ್ಯ. ಜನತೆಯ, ರೈತರ ಸಮಸ್ಯೆಗಳಿಗೆ ನೀವು ಸ್ಪಂದಿಸಲಿಲ್ಲ. ಅದಕ್ಕಾಗಿ ಜನ ನಿಮ್ಮನ್ನು ತಿರಸ್ಕರಿಸಿದ್ದಾರೆ ಎಂದು ಕುಟುಕಿದರು.
ದೋಸ್ತಿ ಸರ್ಕಾರ ಅತಂತ್ರ ಸ್ಥಿತಿಯಲ್ಲಿದೆ. ಅವರೇನಾದ್ರೂ ಸರ್ಕಾರ ವಿಸರ್ಜಿಸಿದರೆ ನಾವು ಸರ್ಕಾರ ರಚಿಸುತ್ತೇವೆ. 105 ಸೀಟು ಗೆದ್ದಿರುವ ನಮಗೆ ಸರ್ಕಾರ ರಚಿಸುವ ನೈತಿಕ ಹಕ್ಕಿದೆ ಎಂದರು.