ಹುಬ್ಬಳ್ಳಿ: ಉಣಕಲ್ ಸಿದ್ದಪ್ಪಜ್ಜನವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಿದ್ದಪ್ಪಜ್ಜನವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಾನು ಚಿಕ್ಕಂದಿನಿಂದಲೂ ಉಣಕಲ್ ಸಿದ್ದಪ್ಪಜ್ಜನ ದೇವಸ್ಥಾನಕ್ಕೆ ಬರುತ್ತಿದ್ದೆ. ಈಗ ಬಜೆಟ್ ತಯಾರಿ ನಡೆಯುತ್ತಿದ್ದು, ಈ ವಿಚಾರವಾಗಿ ಎಲ್ಲಾ ಇಲಾಖೆಗಳೊಂದಿಗೆ ಚರ್ಚೆ ಮಾಡಲಾಗುತ್ತಿದೆ. ರಾಜ್ಯಕ್ಕೆ ಅತ್ಯುತ್ತಮ ಬಜೆಟ್ ನೀಡಲಾಗುವುದು. ಉತ್ತರ ಕರ್ನಾಟಕಕ್ಕೆ ವಿಶೇಷ ಕೊಡುಗೆ ನಿರೀಕ್ಷಿಸಿ ಎಂದರು.
ಫೆಬ್ರವರಿ 17ರಂದು ಬಜೆಟ್ ಸಾಧ್ಯತೆ: 2023ರ ಬಜೆಟ್ ಅಧಿವೇಶನವು ಫೆ.17ರಂದು ನಡೆಯುವ ಸಾಧ್ಯತೆ ಇದ್ದು, ಕೋವಿಡ್ ಹಾಗೂ ಪ್ರವಾಹದ ಕಾರಣದಿಂದ ದುಡಿಯುವ ವರ್ಗಕ್ಕೆ ಸಹಾಯ ಮತ್ತು ಹೆಣ್ಣುಮಕ್ಕಳಿಗೆ ನೆರವಾಗುವ ಯೋಜನೆಗಳನ್ನು ಸರ್ಕಾರ ರೂಪಿಸಲಿದೆ. ಕುಟುಂಬದ ಮಹಿಳೆ ಸ್ವತಂತ್ರವಾಗಿ ಕನಿಷ್ಠ ಮನೆ ನಿರ್ವಹಣೆಗೆ ಅಗತ್ಯವಿರುವ ಆರ್ಥಿಕ ನೆರವು ನೀಡುವಂತಹ ಯೋಜನೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅಲ್ಲದೇ ಪಂಚಪೀಠಗಳ ಅಭಿವೃದ್ಧಿಗೆ ಅಗತ್ಯ ನೆರವು ನೀಡಲಾಗುವುದು ಎಂದು ಬೊಮ್ಮಾಯಿ ಹೇಳಿದ್ದರು.
ಶಿರಸಿಯಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ: ರಾಜ್ಯದ ಮೊದಲ ಪರಿಸರ ವಿಶ್ವವಿದ್ಯಾಲಯವನ್ನು ಶಿರಸಿಯಲ್ಲಿ ಸ್ಥಾಪಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಪರಿಸರ, ತೋಟಗಾರಿಕೆ, ಕೃಷಿ, ಜೀವ ವೈವಿಧ್ಯ, ವನ್ಯಜೀವಿ ರಕ್ಷಣೆ, ಜನಾಭಿವೃದ್ಧಿ ಮತ್ತು ಆರ್ಥಿಕತೆಯ ಕುರಿತಾದ ಸಮಗ್ರ ಅಧ್ಯಯನಕ್ಕಾಗಿ ಇದನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ವಿಶ್ವವಿದ್ಯಾಲಯದ ಜತೆಗೆ ಸಾಂಪ್ರದಾಯಿಕ ಶಿಕ್ಷಣವಾದ ಕಲೆ, ವಾಣಿಜ್ಯ, ವಿಜ್ಞಾನ ಪದವಿ ಕೂಡ ಇರಲಿದೆಯಂತೆ. ಈ ಕಾಂಪೋಸಿಟ್ ವಿಶ್ವವಿದ್ಯಾಲಯ ಸ್ಥಾಪನೆಗೆ ಈ ಬಾರಿಯ ಬಜೆಟ್ನಲ್ಲಿ ಅನುದಾನ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಸಚಿವ ಸಂಪುಟ ವಿಸ್ತರಣೆ: ಹೈಕಮಾಂಡ್ ಸೂಚನೆ ನೀಡುತ್ತಿದ್ದಂತೆ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ. ಕೆಲವು ನಿಗಮಗಳ ಅವಧಿ ಮುಗಿದಿವೆ, ಕೆಲವರದ್ದು ಆಗಿಲ್ಲ. ಇವೆಲ್ಲವನ್ನೂ ಪರಿಶೀಲಿಸಿ ಅಧ್ಯಕ್ಷರು, ಸದಸ್ಯರ ನೇಮಕ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಶಿರಸಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದೆಲ್ಲೆಡೆ ವಿಶ್ವ ದಾಖಲೆಯ ಯೋಗಥಾನ್: ಬೆಂಗಳೂರಿನಲ್ಲಿ ರಾಜ್ಯಪಾಲ ಗೆಹ್ಲೋಟ್ ಚಾಲನೆ