ಹುಬ್ಬಳ್ಳಿ: ಕೋವಿಡ್ ಬಹಳಷ್ಟು ಪಾಠವನ್ನ ಕಲಿಸಿದೆ. ನಮ್ಮ ದೇಶದಲ್ಲಿ ಆರಂಭದಲ್ಲಿ ಈ ವೈರಸ್ ಅನ್ನು ಬಹಳ ಗಂಭೀರವಾಗಿ ಪರಿಗಣಿಸಿರಲಿಲ್ಲ. ಮಾನಸಿಕವಾಗಿ ಸಿದ್ಧವಾಗಿದ್ದಾಗ ಮಾತ್ರ ಇವೆಲ್ಲವನ್ನೂ ಮೆಟ್ಟಿ ಹಾಕಲು ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಭಾರತದಲ್ಲಿ 100 ಕೋಟಿ ಡೋಸ್ ಲಸಿಕೆ ಹಾಕಿರುವ ಹಿನ್ನೆಲೆಯಲ್ಲಿ ಇದರ ಸಂಭ್ರಮಾಚರಣೆಗೆ ಇಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದೀಪ ಬೆಳಗಿಸುವ ಮೂಲಕ ಸಿಎಂ ಚಾಲನೆ ನೀಡಿದರು.
ಬಳಿಕ ಮಾತನಾಡುತ್ತಾ, ಯಾವುದಾದರೂ ವ್ಯಾಪಕ ರೋಗಕ್ಕೆ ಲಸಿಕಾಕರಣವೇ ಮದ್ದು ಅನ್ನೋದು 100 ವರ್ಷಗಳ ಹಿಂದೆ ಸಾಬೀತಾಗಿದೆ. ಹಲವಾರು ಮಾನವನ ಜೀವಗಳು ಹಾನಿಯಾಗಿವೆ. ಯಾವುದಾದರೂ ಈ ರೀತಿ ಸ್ಪೋಟವಾದಾಗ ಹೀಗಾಗುತ್ತದೆ. ಸರ್ಕಾರ ಕೋವಿಡ್ ಪರಿಸ್ಥಿಯನ್ನು ಸಮರ್ಥವಾಗಿ ನಿರ್ವಹಣೆ ಮಾಡಿದೆ ಎಂದರು.
ಖಾಸಗಿಯವರಿಗಿಂತ ಸರ್ಕಾರಿ ಆಸ್ಪತ್ರೆಗಳು ಬಹಳ ಕೆಲಸ ಮಾಡಿವೆ. 24 ಸಾವಿರ ಬೆಡ್ ಹಾಗು 6 ಸಾವಿರ ಆಕ್ಸಿಜನ್ ಬೆಡ್ಗಳ ನಿರ್ಮಾಣ ಆಗಿದೆ. ಕೋವಿಡ್ ನಿಂದಾಗಿ ತಾಲೂಕು ಕೇಂದ್ರಗಳ ಆಸ್ಪತ್ರೆಗಳು ಸುಧಾರಿಸಿವೆ. ಕೋವಿಡ್ ಆರಂಭವಾದಾಗ ಯಾವುದೇ ಸಲಕರಣೆ ಇರಲಿಲ್ಲ. ಪಿಪಿಈ ಕಿಟ್ಗಳು ಇರಲಿಲ್ಲ. ಚೀನಾದಿಂದ ಅವುಗಳನ್ನ ತರಿಸುತ್ತಿದ್ದೆವು. ಆದ್ರೆ ಈಗ ನಾವೇ ಎಲ್ಲವನ್ನ ರಫ್ತು ಮಾಡುವಷ್ಟು ಮುಂದಾಗಿದ್ದೇವೆ ಎಂದರು.
ಲಸಿಕೆ ಹಾಕಿಸುವುದರ ಮೂಲಕ ಮಕ್ಕಳನ್ನು ನ್ಯುಮೋನಿಯಾದಿಂದ ರಕ್ಷಿಸಬೇಕು ಎಂದು ಸಿಎಂ ಇದೇ ವೇಳೆ ತಿಳಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ಜಿಲ್ಲಾಧಿಕಾರಿ ನಿತೀಶ್ ಪಾಟೀಲ್, ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.
ಇದನ್ನೂ ಓದಿ:ಭಾರತದ ವ್ಯಾಕ್ಸಿನೇಷನ್ ವಿಜ್ಞಾನ ಆಧಾರಿತ; 100 ಕೋಟಿ ಲಸಿಕೆಯು ಇತಿಹಾಸದಲ್ಲಿ ಹೊಸ ಅಧ್ಯಾಯ-ಮೋದಿ