ಹುಬ್ಬಳ್ಳಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ಅಸಂಘಟಿತ ಕಾರ್ಮಿಕರು ಜೀವದ ಹಂಗು ತೊರೆದು ಹೋರಾಟ ನಡೆಸುತ್ತಿದ್ದಾರೆ.
ಹೀಗಾಗಿ ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತರು, ನರ್ಸ್ಗಳು, ವೈದ್ಯರು, ಪೌರಕಾರ್ಮಿಕರಲ್ಲಿ ಬಹುತೇಕರು ಕಾರ್ಮಿಕರೇ ಆಗಿದ್ದು, ಅವರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ ಒತ್ತಾಯಿಸಿದ್ದಾರೆ.
ನಗರದ ಎಪಿಎಂಸಿ ಹಮಾಲಿ ಕಾರ್ಮಿಕರ ಕಚೇರಿಯಲ್ಲಿ ಸಾಂಕೇತಿಕವಾಗಿ ನಡೆದ ವಿಶ್ವಕಾರ್ಮಿಕ ದಿನಾಚರಣೆ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಎಷ್ಟೇ ಮನವಿ ಮಾಡಿಕೊಂಡರು. ಕೇಂದ್ರ ರಾಜ್ಯ ಸರ್ಕಾರಗಳು ಅಸಂಘಟಿತ ಕಾರ್ಮಿಕರ ನೆರವಿಗೆ ಬರುತ್ತಿಲ್ಲ. ಇನ್ನೊಂದೆಡೆಗೆ ವಿವಿಧ ವಿಭಾಗದ ಗುತ್ತಿಗೆ ಕಾರ್ಮಿಕರು ಅಂತಂತ್ರವಾಗಿದ್ದು, ಈ ಕಾರ್ಮಿಕರು ಲಾಕ್ಡೌನ್ ಮುಗಿದ ನಂತರವು ಸಂಕಷ್ಟಕ್ಕೀಡಾಗಲಿದ್ದಾರೆ. ಹೀಗಾಗಿ ಸರ್ಕಾರ ಈ ಕಾರ್ಮಿಕರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.
ವಿಶ್ವ ಕಾರ್ಮಿಕ ದಿನದ ನಿಮಿತ್ತ ಧ್ವಜಾರೋಹಣ, ಬೇಡಿಕೆಗಳ ಫಲಕ ಪ್ರದರ್ಶನ, 2020 ಮೇ ಡೇ ಪ್ರಣಾಳಿಕೆ ಓದುವುದು, ಹುತಾತ್ಮರಿಗೆ ಗೌರವಾರ್ಪಣೆ ಮಾಡಲಾಯಿತು. ಸಿಐಟಿಯು ಕರೆಯಂತೆ ಜಿಲ್ಲೆಯ ಹಲವಾರು ಕಡೆ ಗ್ರಾಮ ಪಂಚಾಯಿತಿ ನೌಕರರು, ಹಮಾಲಿ ಕಾರ್ಮಿಕರು, ಬಿಸಿಯೂಟ ನೌಕರರು ಮುಂತಾದವರು, ಮನೆಮನೆಯಲ್ಲಿ ವಾಸವಿರುವ ಪ್ರದೇಶದಲ್ಲಿಯೇ ಕಾರ್ಮಿಕ ದಿನಾಚರಣೆಯನ್ನು ದೈಹಿಕ ಅಂತರ ಕಾಯ್ದುಕೊಂಡು ಆಚರಿಸಿದ್ದು, ವಿಶೇಷವಾಗಿತ್ತು.