ಹುಬ್ಬಳ್ಳಿ: ಲಾಕ್ಡೌನ್ ಸಮಯವನ್ನು ಕಳೆಯಲು ಅಜ್ಜ, ಅಜ್ಜಿ ಮನೆಗೆ ಬಂದ ಪುಟ್ಟ ಬಾಲಕಿಯೊಬ್ಬಳು 150ಕ್ಕೂ ಹೆಚ್ಚು ಚಿತ್ರಗಳನ್ನು ರಚಿಸುವ ಮೂಲಕ ಕಲಾಸಾಧನೆ ಮಾಡಿದ್ದಾಳೆ. ಇಲ್ಲಿನ ಕೇಶ್ವಾಪುರದ ಅಜರಾ ಆನಮ್ ಬೇಪಾರಿ ಎಂಬ 9 ವರ್ಷದ ಬಾಲಕಿಯೇ ಲಾಕ್ಡೌನ್ ವೇಳೆ ಸಮಯ ವ್ಯರ್ಥ ಮಾಡದೆ ಕಲಾ ಸಾಧನೆ ಮಾಡಿದ ಬಾಲಕಿ.
ಆನಂದ ನಗರದ ನಿವಾಸಿಯಾದ ಈ ಬಾಲಕಿ ಲಾಕ್ಡೌನ್ ವೇಳೆ ತನ್ನ ಅಜ್ಜನ ಮನೆಗೆ ರಜೆ ಕಳೆಯಲು ಬಂದಿದ್ದಳು. ಆಗ ಅವರ ಅಜ್ಜ ತಮ್ಮ ಮನೆಯ ಪಕ್ಕದಲ್ಲಿದ್ದ ಚಿತ್ರಕಲಾ ಶಿಕ್ಷಕ ಡಬ್ಲು ಡಿ. ಧಾರವಾಡ ಅವರ ಬಳಿ ಚಿತ್ರಕಲೆ ಕಲಿಯಲು ಬಿಟ್ಟಿದ್ದರು. ಆದ್ರೆ ಒಂದೇ ತಿಂಗಳಲ್ಲಿ ಅಜರಾ ಪೆನ್ಸಿಲ್ ಸ್ಕೆಚ್ ಹಾಕುವುದು, ಚಿತ್ರಗಳಿಗೆ ಬಣ್ಣ ತುಂಬುವುದು, ಬಣ್ಣದ ಮಿಶ್ರಣ ಮಾಡುವುದನ್ನು ಕರಗತ ಮಾಡಿಕೊಂಡಿದ್ದಾಳೆ.
ಹೀಗೆ ರಜೆಯ ದಿನಗಳಲ್ಲಿ ಹೂ, ಹಣ್ಣು, ಪ್ರಾಣಿ, ಪಕ್ಷಿ, ಗಿಡ, ಮರ, ಬಳ್ಳಿ, ಗುಡ್ಡ, ಬೆಟ್ಟ ಸೇರಿದಂತೆ ನಿಸರ್ಗದ ಸೌಂದರ್ಯವನ್ನು ತನ್ನ ಕುಂಚದಲ್ಲಿ ಅರಳಿಸಿದ್ದಾಳೆ. ಸುಮಾರು 150ಕ್ಕೂ ಹೆಚ್ಚು ಚಿತ್ರಗಳನ್ನು ಚಿತ್ರಿಸಿ ತನ್ನ ಕಲೆಯನ್ನು ಪ್ರದರ್ಶನ ಮಾಡಿದ್ದಾಳೆ.
ಸದ್ಯ ಕೇಶ್ವಾಪುರದ ಸೇಂಟ್ ಮೈಕಲ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ 4ನೇ ತರಗತಿ ಓದುತ್ತಿರುವ ಬಾಲಕಿ 300 ಚಿತ್ರಗಳನ್ನು ರಚಿಸಿ ಧಾರವಾಡ, ಬೆಂಗಳೂರು, ಮುಂಬೈ, ದೆಹಲಿಯಲ್ಲಿ ಪ್ರದರ್ಶನ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾಳೆ. ಇದಲ್ಲದೆ ದೆಹಲಿ ಚೈಲ್ಡ್ ನ್ಯಾಶನಲ್ ಅವಾರ್ಡ್ಗೆ ಅಯ್ಕೆಯಾಗುವ ಇಂಗಿತ ಹೊಂದಿದ್ದಾಳೆ.