ಧಾರವಾಡ: ರೈತರಿಗೆ ಆದಾಯ ತಂದು ಕೊಡಬಲ್ಲ ಬೆಳೆಗಳಲ್ಲಿ ಒಂದಾದ ಕಡಲೆಗೆ ಇದೀಗ ರೋಗದ ಕಾಟ ಶುರುವಾಗಿದೆ. ತುಕ್ಕು ರೋಗ ವಕ್ಕರಿಸಿದ ಪರಿಣಾಮ ಜಿಲ್ಲೆಯ ಅನ್ನದಾತರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಧಾರವಾಡ-ಹುಬ್ಬಳ್ಳಿ, ಕುಂದಗೋಳ ಮತ್ತು ನವಲಗುಂದ ತಾಲೂಕಿನ ವ್ಯಾಪ್ತಿಯಲ್ಲಿ ಹಿಂಗಾರು ಹಂಗಾಮಿಗೆ ಸುಮಾರು ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೈತರು ಕಡಲೆ ಬೆಳೆದಿದ್ದಾರೆ. ಆದರೀಗ ಧಾರವಾಡದ ಬಹುತೇಕ ಭಾಗಗಳಲ್ಲಿ ಕಡಲೆ ಬೆಳೆಗೆ ತುಕ್ಕು ರೋಗ ಅಂಟಿಕೊಂಡಿದ್ದು, ರೈತರ ನಿದ್ದಗೆಡಿಸಿದೆ.
ನವೆಂಬರ್ ತಿಂಗಳಲ್ಲಿ ಸುರಿದ ಮಳೆಯಿಂದ ಹುಳಿ ಹಿಡಿಯುವ ಹಂತದಲ್ಲಿ ಕಡಲೆಗೆ ಸಾಲು-ಸಾಲು ರೋಗಗಳು ಬಾಧಿಸಿದ್ದವು. ಹೀಗಾಗಿ ಅನೇಕ ಕ್ರಿಮಿನಾಶಕ ಸಿಂಪಡಣೆ ಮಾಡಿ ಈಗಾಗಲೇ ಸಾವಿರಾರು ರೂಪಾಯಿ ಖರ್ಚು ಮಾಡಿ ಕಡಲೆಯನ್ನು ರೈತರು ಉಳಿಸಿಕೊಂಡು ಬಂದಿದ್ದಾರೆ. ಈಗ ಕಾಯಿ ಗಟ್ಟಿಯಾಗುವ ಹಂತದಲ್ಲಿ ಕಡಲೆ ಬೆಳೆಗೆ ರೋಗ ಕಾಣಿಸಿಕೊಂಡಿದ್ದು, ಕಾಳುಗಳು ಸಪ್ಪೆಯಾಗಿರುವುದರಿಂದ ರೈತರಿಗೆ ಇಳುವರಿ ಕುಂಠಿತವಾಗುವ ಆತಂಕವೂ ಎದುರಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿಂದು 28,264 ಮಂದಿಗೆ ಕೋವಿಡ್ ಸೋಂಕು: 68 ಸೋಂಕಿತರು ಬಲಿ
ರೋಗದಿಂದ ಕಡಲೆ ಬೆಳೆಯನ್ನು ಉಳಿಸಿಕೊಳ್ಳುವುದು ಅಸಾಧ್ಯದ ಮಾತಾಗಿದೆ. ಬಿತ್ತನೆ ಮಾಡಿದಷ್ಟು ಕಾಳುಗಳು ಸಹ ಕೈಗೆ ಸಿಗೋದಿಲ್ಲ. ಜಾನುವಾರುಗಳು ಸಹ ಇದನ್ನು ತಿನ್ನೋದಿಲ್ಲ ಎಂದು ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ