ಹುಬ್ಬಳ್ಳಿ: ವಾಸ್ತು ತಜ್ಞ ಚಂದ್ರಶೇಖರ ಗುರೂಜಿಯವರ ಅಂತ್ಯ ಸಂಸ್ಕಾರ ಹುಬ್ಬಳ್ಳಿಯ ಸುಳ್ಳ ಗ್ರಾಮದಲ್ಲಿ ನೆರವೇರಿದೆ. ವೀರಶೈವ ವಿಧಿ-ವಿಧಾನದ ಪ್ರಕಾರ ಅಂತ್ಯಕ್ರಿಯೆಯನ್ನು ಮಾಡಲಾಯಿತು. ಮೂರುಸಾವಿರ ಮಠದ ಆರು ಸ್ವಾಮೀಜಿಗಳು ಪಾಲ್ಗೊಂಡು ವಿಧಿ-ವಿಧಾನ ನೆರವೇರಿಸಿದರು. ಅಂತಿಮ ದರ್ಶನಕ್ಕೆ ನಗರದ ಹೊರವಲಯದ ಸುಳ್ಳ ಗ್ರಾಮದ ಜಮೀನಿನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯದ ವಿವಿಧ ಸ್ಥಳಗಳಿಂದ ನೂರಾರು ಜನರು ಬಂದು ಗುರೂಜಿಯವರ ಅಂತಿಮ ದರ್ಶನ ಪಡೆದರು.
ಗುರೂಜಿ ಮೃತದೇಹಕ್ಕೆ ಪತ್ನಿ ಅಂಕಿತಾ ಅಂತಿಮ ಪೂಜೆ ಸಲ್ಲಿಸಿದ್ರು. ಪಂಚಾಕ್ಷರಿ ಮಹಾ ಮಂತ್ರದೊಂದಿಗೆ ಅಂತಿಮ ವಿಧಿವಿಧಾನ ನೆರವೇರಿದೆ. ಅರ್ಚಕ ಕೋಟ್ರಯ್ಯಶ್ರೀಗಳ ನೇತೃತ್ವದಲ್ಲಿ ಪುತ್ರಿ ಸ್ವಾತಿ, ಅಣ್ಣನ ಮಗ ಸಂತೋಷ ವಿಧಿವಿಧಾನ ನೆರವೇರಿಸಿದರು.
ಹುಬ್ಬಳ್ಳಿಯ ಕಿಮ್ಸ್ನಲ್ಲಿ ವಾಸ್ತುತಜ್ಞ ಚಂದ್ರಶೇಖರ್ ಗುರೂಜಿ ಮರಣೋತ್ತರ ಪರೀಕ್ಷೆ ಮುಗಿಯುತ್ತಿದ್ದಂತೆ, ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಯ್ತು. ಹುಬ್ಬಳ್ಳಿಯಿಂದ ಸುಳ್ಳ ಗ್ರಾಮದವರೆಗೆ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ಹುಬ್ಬಳ್ಳಿಯಿಂದ ಸುಳ್ಳದತ್ತ ಪಾರ್ಥೀವ ಶರೀರ ಶಿಫ್ಟ್ ಮಾಡ್ತಿದಂತೆ ಹಾದಿಯುದ್ದಕ್ಕೂ ಜನರು ಕಿಕ್ಕಿರಿದು ನಿಂತಿದ್ರು. ಗುರೂಜಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ರು. ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಬಂದ ಪುತ್ರಿ ಸ್ವಾತಿ ಮತ್ತು ಪತ್ನಿ ಅಂಕಿತಾ ಕಣ್ಣೀರಾದರು.
ಚಂದ್ರಶೇಖರ ಗುರೂಜಿ ಸಾಕಿದ್ದ ಶ್ವಾನ ಪ್ರಿನ್ಸ್ ಸಹ ಗುರೂಜಿಯ ಅಂತಿಮ ದರ್ಶನ ಪಡೆಯಿತು. ಈ ವೇಳೆ ಮೃತದೇಹದ ಪೆಟ್ಟಿಗೆ ಮೇಲೆ ಕುಳಿತು ಮರುಗಿತು. ಅಂತ್ಯಕ್ರಿಯೆ ಸಂದರ್ಭದಲ್ಲಿ ಗುರೂಜಿ ಕಚೇರಿಯಲ್ಲಿ ಕೆಲಸ ಮಾಡ್ತಿದ್ದ ಮುಂಬೈ ಸಿಬ್ಬಂದಿ ಕೂಡ ಆಗಮಿಸಿದ್ರು . ಗುರೂಜಿಯನ್ನ ನೆನೆದು ಅವರೆಲ್ಲಾ ಕಣ್ಣೀರು ಹಾಕಿದ್ರು.
ಇದನ್ನೂ ಓದಿ: ಚಂದ್ರಶೇಖರ ಗುರೂಜಿ ಅಗಲಿಕೆಯಿಂದ ನೋವಾಗಿದೆ: ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ