ಧಾರವಾಡ: ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಎದುರಾಗಿರುವ ತೀವ್ರ ಬರ ಪರಿಸ್ಥಿತಿಯನ್ನು ಕೇಂದ್ರದ ಬರ ಅಧ್ಯಯನ ತಂಡ ವಿವಿಧ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನ ನಡೆಸಿತು. ಕೇಂದ್ರದ ಅಧಿಕಾರಿಗಳು ಬೆಳೆ ಹಾನಿಗೆ ಸಂಬಂಧಿಸಿದ ಮಾಹಿತಿಯನ್ನು ರಾಜ್ಯದ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಪಡೆದುಕೊಂಡರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನೇತೃತ್ವದ ಅಧಿಕಾರಿಗಳ ತಂಡವು ಜಿಲ್ಲೆಯ ಮಳೆಕೊರತೆ, ಬಿತ್ತನೆಯಾಗದ ಪ್ರದೇಶ ಹಾಗೂ ಬೆಳೆ ನಾಶ, ಹಸಿರು ಬರದ ಕುರಿತು ಮನವರಿಕೆ ಮಾಡಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, "ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ನಿಗದಿತ ಸಮಯಕ್ಕೆ ಬಾರದೇ ಇರುವುದರಿಂದ ಜಿಲ್ಲೆಯ ರೈತರು ಜೂನ್ ತಿಂಗಳಲ್ಲಿ ಮಾಡಬೇಕಿದ್ದ ಬಿತ್ತನೆಯನ್ನು ಮುಂದೂಡಿದರು. ಜೂನ್ ಅಂತ್ಯದೊಳಗೆ ಸಾಮಾನ್ಯ ಮಳೆಗಿಂತ ಶೇ.65 ರಷ್ಟು ಮಳೆ ಕೊರತೆಯಾಗಿದ್ದು ಜಿಲ್ಲೆಯಲ್ಲಿ ಶೇ.16 ರಷ್ಟು ಮಾತ್ರ ಬಿತ್ತನೆ ಮಾಡಲಾಗಿತ್ತು. ಜುಲೈ ತಿಂಗಳಲ್ಲಿ ಅಧಿಕ ಮಳೆಯಾದರೂ ಹಂಗಾಮು ತಡವಾಗಿದ್ದರಿಂದ ಶೇ.68 ರಷ್ಟು ಮಾತ್ರ ಭೂಮಿ ಬಿತ್ತನೆ ಮಾಡಲಾಯಿತು".
"ಆಗಸ್ಟ್ ತಿಂಗಳಲ್ಲಿ ಮತ್ತೆ ಶೇ.65 ರಷ್ಟು ಮಳೆ ಕೊರತೆ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಕಡಿಮೆ ಮಳೆಯಾಗಿದ್ದರಿಂದ ಬಿತ್ತನೆಯಾಗಿರುವ ಬೆಳೆಯ ಶೇ.91 ರಷ್ಟು ಹಾನಿಯಾಗಿದೆ. ಜಿಲ್ಲೆಯಲ್ಲಿ ಬೆಳೆಯು ಕಣ್ಣಿಗೆ ಹಸಿರಾಗಿ ಕಂಡರೂ ಅದರಲ್ಲಿ ಕಾಳು ಉತ್ಪತ್ತಿಯಾಗಿಲ್ಲ. ಹಲವಾರು ರೈತರು ಬಿತ್ತನೆ ಮಾಡಿಲ್ಲ. ಮಳೆ ಕೊರತೆಯಿಂದಾಗಿ ತೀವ್ರ ಬರಗಾಲದ ನಡುವೆಯೂ ಹಸಿರು ಬರ ಹೆಚ್ಚಾಗಿದೆ" ಎಂದು ವಿವರಿಸಿದರು.
ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ನರೇಗಾ ಕೂಲಿ ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೆ ಭೇಟಿ ನೀಡಿದ ಕೇಂದ್ರ ತಂಡ, ಜಿ.ಪಂ. ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ರಾಜ್ಯ ಸರ್ಕಾರವು ಜಿಲ್ಲೆಯ ಐದು ತಾಲೂಕುಗಳನ್ನು 'ಬರ ಪೀಡಿತ' ತಾಲೂಕುಗಳೆಂದು ಘೋಷಿಸಿದೆ. ಧಾರವಾಡ, ಹುಬ್ಬಳ್ಳಿ, ಹುಬ್ಬಳ್ಳಿ ನಗರ, ಕುಂದಗೋಳ, ನವಲಗುಂದ ತಾಲೂಕುಗಳು 'ಬರಪೀಡಿತ ಪ್ರದೇಶ'ಗಳೆಂದು ಗುರುತಿಸಲಾಗಿದೆ. ಈ ಐದು ತಾಲೂಕುಗಳಲ್ಲಿ ನಾನಾ ರೀತಿಯ ಬೆಳೆಹಾನಿ ಸಂಭವಿಸಿದೆ. ಮಳೆ ಕೊರತೆಯಿಂದ ಭತ್ತ ಸೇರಿ ವಿವಿಧ ಬೆಳೆ ನಾಶವಾಗಿದ್ದು, ಒಟ್ಟು ಜಿಲ್ಲೆಯ 1,59,599 ಹೆೆಕ್ಟೇರ್ ಪ್ರದೇಶದಲ್ಲಿ ರೈತರು ಬಿತ್ತನೆ ಮಾಡಿದ್ದು, 1,44,483 ಹೆ. ಪ್ರದೇಶದಲ್ಲಿ (ಶೇ.91) ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಡಳಿತ ವರದಿ ಸಲ್ಲಿಸಿದೆ. ಜಿಲ್ಲೆಯ ಅಳ್ನಾವರ, ಕಲಘಟಗಿ ಮತ್ತು ಅಣ್ಣಿಗೇರಿ ತಾಲೂಕುಗಳಲ್ಲಿಯೂ ಬೆಳೆ ಹಾನಿ ಉಂಟಾಗಿದ್ದು ಬರದ ಛಾಯೆ ಆವರಿಸಿದೆ ಎಂಬ ವರದಿಯ ಅಂಶಗಳನ್ನು ಜಿಲ್ಲಾಡಳಿತವು ಕೇಂದ್ರ ತಂಡದ ಗಮನಕ್ಕೆ ತಂದಿದೆ.
ಇದನ್ನೂಓದಿ: ಬೆಳಗಾವಿ: ಕೇಂದ್ರ ಬರ ಅಧ್ಯಯನ ತಂಡದ ಎದುರು ಆತ್ಮಹತ್ಯೆಗೆ ಯತ್ನಿಸಿದ ರೈತ